ಕಾಸರಗೋಡು: ಕಾಸರಗೋಡು ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಆನ್ ಲೈನ್ ಮೂಲಕ ಬುಧವಾರ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಗಳ ಅಂಗವಾಗಿ ಈ ಅದಾಲತ್ ನಡೆಯಿತು.
ಅದಾಲತ್ ನಲ್ಲಿ 33 ದೂರುಗಳನ್ನು ಪರಿಶೀಲಿಸಲಾಗಿದ್ದು, 13 ದೂರುಗಳಲ್ಲಿ ಜಿಲ್ಲಾಧಿಕಾರಿ ದೂರುದಾತರೊಂದಿಗೆ ನೇರವಾಗಿ ಸಂವಾದ ನಡೆಸಿದರು. ಮುಳಿಯಾರ ಗ್ರಾಮಪಂಚಾಯತ್ ನ ಒಂದನೇ ವಾರ್ಡಿನ ಸಮುದಾಯ ಸಭಾಂಗಣಕ್ಕೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂಬ ದೂರಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಗ್ರಾಮಪಂಚಾಯತ್ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಕುತ್ತಿಕೋಲು ಪಂಚಾಯತ್ ನ ಕುನ್ನಮ್ಮಲ್ ಪರಿಶಿಷ್ಟ ಪಂಗಡ ಕಾಲನಿಗೆ ರಸ್ತೆ ಸೌಲಭ್ಯ ಬೇಕು ಎಂಬ ಬೇಡಿಕೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಈ ಸಂಬಂಧ ರಾಜ್ಯ ಸರಕಾರದ ಮಂಜೂರಾತಿ ಲಭಿಸಿದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನೌಕರಿ ಸಂಬಂಧ ದೂರು, ಸಾಲ ಮನ್ನಾ ಸಹಿತ ದೂರುಗಳು, ಕುಡಿಯುವ ನಿರು, ವಿದ್ಯುತ್ ಲಭ್ಯತೆ ಸಂಬಂಧ ದೂರು, ಭೂಹಕ್ಕು ಪತ್ರ ಸಂಬಂಧ ದೂರುಗಳು ಅಧಿಕವಾಗಿದ್ದುವು. ಆನ್ ಲೈನ್ ಮೂಲಕ ಜಿಲ್ಲಾಧಿಕಾರಿ ನಡೆಸಿದ ದೂರು ಪರಿಹಾರ ಅದಾಲತ್ ಗಳಲ್ಲಿ ಇದು ಎರಡನೇಯದಾಗಿದೆ.
ನಾಳೆ ಹೊಸದುರ್ಗ ತಾಲೂಕು ಅದಾಲತ್:
ಹೊಸದುರ್ಗ ತಾಲೂಕಿನ ದೂರು ಪರಿಹಾರ ಅದಾಲತ್ ನಾಳೆ(ಜೂ.19) ಆನ್ ಲೈನ್ ಮೂಲಕ ನಡೆಯಲಿದೆ. ನೂತನ ದೂರುದಾತರು ಅಕ್ಷಯ ಕೇಂದ್ರಗಳ ಆನ್ ಲೈನ್ ಸೌಲಭ್ಯಗಳ ಮೂಲಕ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸುವ ಅವಕಾಶಗಳಿವೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆನ್ ಲೈನ್ ಅದಾಲತ್ ನಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯ ಕಂದಾಯಾಧಿಕಾರಿ ಆರ್.ಅಹಮ್ಮದ್ ಕಬೀರ್, ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್.) ಕೆ.ರವಿಕುಮಾರ್, ಕಾಸರಗೋಡು ತಹಸೀಲ್ದಾರ್ ಕೆ.ರಾಜನ್, ಎನ್.ಐ.ಸಿ. ಅಧಿಕಾರಿ ಕೆ.ರಾಜನ್, ಅಕ್ಷಯ ಜಿಲ್ಲಾ ಪ್ರಾಜೆಕ್ಟ್ ಪ್ರಬಂಧಕ ಎಂ.ಎಸ್.ಅಜೀಷಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.

