ತಿರುವನಂತಪುರ: ರಾಜ್ಯವು ಕೋವಿಡ್‍ನ ಮೂರನೇ ಹಂತವನ್ನು ಪ್ರವೇಶಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ನಿನ್ನೆ ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಯವರು ಈ ಬಗ್ಗೆ ಸುಳಿವು ನೀಡಿದರು.
ಲಾಕ್-ಡೌನ್ ನಿಬರ್ಂಧಗಳನ್ನು ಕಡಿತಗೊಳಿಸುವ ಮೂಲಕ ಮತ್ತು ಇತರ ದೇಶಗಳು ಮತ್ತು ರಾಜ್ಯಗಳಿಂದ ಪ್ರಯಾಣಿಸಲು ಅವಕಾಶ ನೀಡುವುದರೊಂದಿಗೆ, ಕೇರಳವು ಕೋವಿಡ್ ವಿಸ್ತರಣೆಯ ಮೂರನೇ ಹಂತವನ್ನು ಪ್ರವೇಶಿಸಿದೆ. ಮೇ 4 ರ ಹೊತ್ತಿಗೆ 3 ಜನರು ಸಾವನ್ನಪ್ಪಿದ್ದರು. ಈಗ ಅದು 20 ಕ್ಕೆ ಏರಿದೆ. ಕೇರಳದ ಹೊರಗಿನಿಂದ ಬಂದ ಹೆಚ್ಚಿನ ವೃದ್ಧರು ಸಾವನ್ನಪ್ಪುತ್ತಿದ್ದಾರೆ. ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಒಂದೇ ನಿಯಂತ್ರಣಕ್ಕೆ ಈಗಿರುವ ದಾರಿಯಾಗಿದೆ. ಲಾಕ್ ಡೌನ್ ಕಾನೂನನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಿರುವುದು ಮತ್ತು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಿಗೊಳಿಸಿರುವುದರಿಂದ ರಾಜ್ಯ ಈವರೆಗೆ ಸ್ತುತ್ಯರ್ಹ ರೀತಿಯಲ್ಲಿ ವೈರಸ್ ನ ಧಾಳಿಯಿಂದ ತಪ್ಪಿಸಿಕೊಂಡಿದೆ. ರಿವರ್ಸ್ ಕ್ಯಾರೆಂಟೈನ್ ಅನ್ನು ಯಾವುದೇ ಲೋಪದೋಷಗಳಿಲ್ಲದೆ ಜಾರಿಗೊಳಿಸಿದರೆ ಮಾತ್ರ ರೋಗವನ್ನು ತಡೆಗಟ್ಟಬಹುದು ಎಂದು ಸಿಎಂ ಹೇಳಿದರು.
ಕೋವಿಡ್ ಸಾಂಕ್ರಾಮಿಕವಾಗಿ ಹರಡುತ್ತಿದೆಯೇ ಎಂದು ತಿಳಿಯಲು ವ್ಯಾಪಕ ಪರಿಶೋಧನೆಗಳು ಪ್ರಗತಿಯಲ್ಲಿದೆ. ಖಾಸಗಿ ಪ್ರಯೋಗಾಲಯಗಳಲ್ಲಿನ ಆರ್‍ಟಿ ಪಿಸಿಆರ್ ಪರೀಕ್ಷೆಗಳ ವೆಚ್ಚವನ್ನು ಕೇರಳದಲ್ಲಿ ಸರ್ಕಾರವು ಇತರ ಕೆಲವು ರಾಜ್ಯಗಳಂತೆ ನಿಗದಿಪಡಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಬಗ್ಗೆ ಸರ್ಕಾರ ಅಗತ್ಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.


