ಕೊಚ್ಚಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಮೊಟಕುಗೊಂಡಿದ್ದ ಖಾಸಗೀ ಬಸ್ ಗಳ ಸಂಚಾರಕ್ಕೆ ವಾರಗಳ ಹಿಂದೆಯಷ್ಟೇ ಅನುಮತಿ ನೀಡಲಾಗಿತ್ತು. ಆದರೆ ಪ್ರಯಾಣಿಕರ ಕೊರತೆ, ನಿಬಂಧನೆಗಳು ಹಾಗೂ ಹೆಚ್ಚಿದ ಟಿಕೆಟ್ ದರಗಳ ಕಾರಣ ನಷ್ಟ ಅನುಭವಿಸುವಂತಾದ ಖಾಸಗೀ ಬಸ್ ಗಳು ಸಂಚಾರ ಮೊಟಕುಗೊಳಿಸಲು ತೀರ್ಮಾನಿಸಿದೆ. ಸೋಮವಾರದ ವೇಳೆಗೆ ರಾಜ್ಯದ ಹೆಚ್ಚಿನ ಮಾರ್ಗಗಳಲ್ಲಿ ಬಸ್ಸುಗಳು ನಿಲ್ಲುವ ಸಾಧ್ಯತೆ ಇದೆ. ಆದರೆ ಇದು ಬಸ್ ಮುಷ್ಕರವಲ್ಲ. ಸೇವೆಯ ವೈಫಲ್ಯದಿಂದಾಗಿ ಸೇವೆಯನ್ನು ರದ್ದುಗೊಳಿಸಲಾಗುವುದು ಎಂದು ಬಸ್‍ಗಳ ಮಾಲೀಕರ ಸಂಘ ತಿಳಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ನಿಬರ್ಂಧಗಳಿಗೆ ಹೆಚ್ಚುವರಿಯಾಗಿ ಬಸ್ ದರವನ್ನು ಕಡಿತಗೊಳಿಸುವುದರಿಂದ ಖಾಸಗಿ ಬಸ್ ಸೇವೆಗೆ ತೊಂದರೆಯಾಗಿದೆ ಎಂದು ಕೆಎಂಟಿಸಿ ಅಧ್ಯಕ್ಷ ರಾಜು ಹೇಳಿರುವರು. ಯಾವುದೇ ಸಂಘಟನೆ ಮುಷ್ಕರಕ್ಕೆ ಕರೆ ನೀಡಿಲ್ಲ. ನಿರ್ವಹಿಸಲು ಸಾಧ್ಯವಾಗದ ಕಾರಣ ಸೇವೆಯನ್ನು ಮೊಟಕುಗೊಳಿಸಲಾಗುತ್ತಿದೆ. ಸರ್ಕಾರವು ಕನಿಷ್ಠ ಪ್ರಯಾಣ ದರವನ್ನು 12 ರೂ.ಗಳಾಗಿ ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿಸಿದೆ. ಆದರೂ ನಿರ್ವಹಿಸುವಲ್ಲಿ ಈ ಮೊತ್ತ ಸಾಕಾಗುತ್ತಿಲ್ಲ ಎಂದು ಬಸ್ ಮಾಲಕರ ಸಂಘ ತಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 1,000 ಕ್ಕಿಂತ ಕಡಿಮೆ ಬಸ್‍ಗಳಷ್ಟೇ ಸೇವೆ ನಡೆಸುತ್ತಿದೆ ಎಂದು ಬಸ್ ಮಾಲಕರ ಸಂಘ ತಿಳಿಸಿದೆ. ಕೆಎಂಟಿಸಿ ಅಡಿಯಲ್ಲಿ ಕೊಚ್ಚಿಯಲ್ಲಿ ಸಂಚರಿಸುವ ಬಸ್‍ಗಳನ್ನು ಸೋಮವಾರದೊಳಗೆ ನಿಲ್ಲಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಪ್ರಸ್ತುತ, ಕೊಚ್ಚಿಯಲ್ಲಿ ಕೇವಲ 40 ಬಸ್‍ಗಳು ಸಂಚಾರ ನಡೆಸುತ್ತಿವೆ. ಕೊಝಿಕ್ಕೋಡಿನಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ, ನಷ್ಟದಿಂದಾಗಿ ಬಸ್ ಓಡಿಸದಿರಲು ಬಸ್ ಮಾಲೀಕರು ನಿರ್ಧರಿಸಿದೆ. ಮೇ. 21 ರಿಂದ ರಾಜ್ಯದ ಕೆಲವು ನಗರ ಪ್ರದೇಶಗಳಲ್ಲಿ ಖಾಸಗೀ ಬಸ್ ಸಂಚಾರ ಪುನರಾರಂಭಗೊಂಡಿತ್ತು. ಆದರೆ ನಿಬರ್ಂಧಗಳಿಂದಾಗಿ, ಹೆಚ್ಚಿನ ಬಸ್ಸುಗಳು ತಮ್ಮ ಸೇವೆಯನ್ನು ಪ್ರಾರಂಭಿಸಲಿಲ್ಲ. ಮೊದಲ ಹಂತದಲ್ಲಿ, ಪ್ರತಿ ಸೀಟಿಗೆ ಒಬ್ಬ ಪ್ರಯಾಣಿಕರಿಗೆ ಕನಿಷ್ಠ 12 ರೂ ಟಿಕೆಟ್‍ನೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಆದರೆ ಎಲ್ಲಾ ಆಸನಗಳಲ್ಲಿ ಜನರಿಗೆ ಅವಕಾಶ ಕಲ್ಪಿಸಲು ಅನುಮೋದನೆ ನೀಡಿದ ನಂತರ ಹೆಚ್ಚಿಸಿದ ಬಸ್ ಟಿಕೆಟ್ ದರವನ್ನು ಹಿಂಪಡೆಯಲಾಯಿತು. ಇದು ಪ್ರತಿದಿನ ಅವರಿಗೆ ದೊಡ್ಡ ನಷ್ಟವನ್ನುಂಟುಮಾಡುತ್ತಿದೆ ಎಂದು ಮಾಲೀಕರು ಹೇಳುತ್ತಾರೆ.
ಪ್ರಯಾಣಿಕರ ಕೊರತೆಯಿಂದಾಗಿ ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮಾಲಿಕರ ಸಂಘ ತಿಳಿಸಿದ್ದು ಬಸ್ ನಿರ್ವಾಹಕರು ಕರ್ತವ್ಯಕ್ಕೂ ಹಾಜರಾಗುತ್ತಿಲ್ಲ. ಭಾರೀ ನಷ್ಟ ಅನುಭವಿಸುತ್ತಿರುವ ದಿನನಿತ್ಯದ ಬಸ್ ಸಂಚಾರವನ್ನು ಮುಂದುವರಿಸುವ ಬದಲಿಗೆ ಸಂಚಾರ ಮೊಟಕುಗೊಳಿಸುವುದು ಉತ್ತಮವೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಈಕ್ರಮ ಕೈಗೊಳ್ಳಲಾಯಿತೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲೂ ಶನಿವಾರದಿಂದ ಎಲ್ಲಾ ಖಾಸಗೀ ಬಸ್ ಗಳು ಸಂಚಾರ ಮೊಟಕುಗೊಳಿಸಿದೆ.

