ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಜೊತೆಗೆ ಮಲೆನಾಡ ಪ್ರದೇಶಗಳಲ್ಲಿ ತಲೆದೋರುತ್ತಿರುವ ಡೆಂಗೆಜ್ವರ ಬಗೆಗೂ ಅತೀವ ಜಾಗ್ರತೆ ಪಾಲಿಸಬೇಕು. ಈ ನಿಟ್ಟಿನಲ್ಲಿ ಚುರುಕಿನ ಪ್ರತಿರೋಧ ಚಟುವಟಿಕೆಗಳ ಅಗತ್ಯವಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅಭಿಪ್ರಾಯಪಟ್ಟರು.
ಪಾಣತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕುಟುಂಬ ಆರೋಗ್ಯ ಕೇಂದ್ರವಾಗಿ ಭಡ್ತಿಯ ಘೋಷಣೆ, ನೂತನ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನೆರವೇರಿಸಿ ಅವರು ಮಾತನಾಡಿದರು.
ಸೋಂಕು ಹರಡುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಭೀತಿ ಬೇಡ, ಜಾಗರೂಕತೆ ಬೇಕು. ಪುಟ್ಟ ಅಸಡ್ಡೆ ಗಂಭೀರ ಸಮಸ್ಯೆಗೆ ಕಾರಣವಾದೀತು ಎಂಬ ಕಾಳಜಿ ಅಗತ್ಯ. ಪ್ರಾರಂಭದ ಹಂತದಲ್ಲೇ ಜಾಗ್ರತೆ ಕೈಬಿಡದೆ ಪ್ರತಿರೋಧ ಚಟುವಟಿಕೆಗಳನ್ನು ಆರಂಭಿಸಿದ್ದು, ರಾಜ್ಯವನ್ನು ಜಗತ್ತಿಗೆ ಮಾದರಿಯಾಗಿಸಿದೆ. ಮೂರನೇ ಹಂತದಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ಪ್ರತಿರೋಧ ಚಟುವಟಿಕೆಗಳನ್ನೂ ಹೆಚ್ಚುವರಿ ಚುರುಕುಗೊಳಿಸಲಾಗುತ್ತಿದೆ ಎಂದವರು ತಿಳಿಸಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಮಾಜಿ ಸಂಸದ ಪಿ.ಕರುಣಾಕರನ್, ನಬಾರ್ಡ್ ಪ್ರತಿನಿಧಿ ಜ್ಯೋತಿಷ್ ಜಗನ್ನಾಥ್, ಜಿಲ್ಲಾ ಪಂಚಾಯತ್ ಸದಸ್ಯರಾದ ಇ.ಪದ್ಮಾವತಿ, ಎಂ.ನಾರಾಯಣನ್, ಕಾಸರಗೋಡು ಡಿ.ಪಿ.ಎಂ.ರಾಮನ್ ಸ್ವಾತಿ ವಾಮನ್ ಮೊದಲಾದವರು ಉಪಸ್ಥಿತರಿದ್ದರು.


