ಕಾಸರಗೋಡು: ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟು ಬಿಗಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೇ ಕೆಲವರು ಆಗಮಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು. ಆರೋಗ್ಯ ಇಲಾಖೆಯ ಸಲಹೆ ಪ್ರಕಾರ ಮಾತ್ರ ಸಂಸ್ಥೆಗಳಲ್ಲಿ ಎ.ಸಿ. ಬಳಸಬಹುದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಪ್ರದೇಶಗಳಲ್ಲಿ ಜನ ಗುಂಪುಗೂಡಕೂಡದು ಎಂದವರು ತಿಳಿಸಿದರು.
ಡ್ರೈವಿಂಗ್ ಸ್ಕೂಲ್ ಗಳು ನಿಬಂಧನೆಗಳ ಅನ್ವಯ ಚಟುವಟಿಕೆ ನಡೆಸಬಹುದು. ಏಕಕಾಲಕ್ಕೆ ಒಬ್ಬರಿಗೆ ಮಾತ್ರ ವಾಹನ ಚಾಲನೆ ಕಲಿಕೆ ನಡೆಸಬಹುದು. ಮಾಸ್ಕ್ ಧಾರಣೆ, ಸಾನಿಟೈಸರ್ ಬಳಕೆ ಸಹಿತ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕರ್ನಾಟಕದಿಂದ ಪಾಸ್ ಇಲ್ಲದೆ ಅಕ್ರಮವಾಗಿ ಜಿಲ್ಲೆಯ ಗಡಿ ಮೂಲಕ ಕೇರಳ ಪ್ರವೇಶ ನಡೆಸಿದರೆ ಕ್ರಮಕೈಗೊಳ್ಳಲಾಗುವುದು. ಗಡಿ ಪ್ರದೇಶಗಳಲ್ಲಿ ಪೆÇಲೀಸ್ ನಿಗಾ ಬಿಗಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಕೇರಳದಿಂದ ಕರ್ನಾಟಕದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳಿದ್ದವರಿಗೆ ಮರಳುವ ವೇಳೆ ಪಾಸ್ ಮಂಜೂರು ಮಾಡುತ್ತಿಲ್ಲ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹುಸಿ ಸುದ್ದಿ ಹರಡಲಾಗುತ್ತಿದ್ದೆ. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಮಾತ್ರ ಈ ಸಂಬಂಧ ಮಂಜೂರಾತಿ ನೀಡಲಾಗುತ್ತಿದೆ. ಮಂಜೇಶ್ವರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ಸರ್ಟಿಫಿಕೆಟ್ ಸಹಿತ ಆಂಬುಲೆನ್ಸ್ ಮೂಲಕವಷ್ಟೇ ಕರ್ನಾಟಕದ ಆಸ್ಪತ್ರೆಗೆ ತೆರಳುವ ಅನುಮತಿ ನೀಡಲಾಗುತ್ತಿದೆ. ತಪ್ಪು ವಾರ್ತೆ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಲಾಕ್ ಡೌನ್ ಅವಧಿಯಲ್ಲಿ ಊರಿಗೆ ತೆರಳಿದ್ದು, ಪ್ರಾಯೋಜಕರ ಹೊಣೆಗಾರಿಕೆಯಲ್ಲಿ ನೌಕರಿಗೆ ಮರಳಲು ಬಯಸುವವರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ಸಿದ್ಧಪಡಿಸಿರುವ ನಿಬಂಧನೆಗಳನ್ನು ರಾಜ್ಯ ಸರಕಾರದ ಮಂಜೂರಾತಿಗಾಗಿ ಕಳುಹಿಸಲಾಗಿದೆ. ವಿವಿಧ ವಿಚಾರಗಳಲ್ಲಿ ಚರ್ಚೆ ನಡೆಸಲಾಯಿತು.


