ಕಾಸರಗೋಡು: ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ವಿದ್ಯಾನಗರ ಬಳಿಯ ಉದಯಗಿರಿಯಲ್ಲಿ ನಿರ್ಮಿಸಲಾದ ವಕಿರ್ಂಗ್ ವುಮನ್ಸ್ ಹಾಸ್ಟೆಲ್ ನಾಳೆ(ಜೂ.19ರಂದು) ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಜು.1ರಿಂದ ಹಾಸ್ಟೆಲ್ ಚಟುವಟಿಕೆ ಆರಂಭಗೊಳ್ಳಲಿದೆ.
5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹಾಸ್ಟೆಲ್ ನಲ್ಲಿ 24 ತಾಸುಗಳ ಸೆಕ್ಯೂಟಿರಿಟಿ ಸಿಸ್ಟಂ, ಸಿ.ಸಿ.ಟಿ.ವಿ.ಸೌಲಭ್ಯ, ವಿಶಾಲ ಗ್ರಂಥಾಲಯ, ಕಲಿಕಾ ಕೊಠಡಿ, ಯೋಗ ತರಬೇತಿ ಸೌಲಭ್ಯ, ಎಲ್.ಇ.ಡಿ. ಪ್ರಾಜಕ್ಟರ್ ಸಹಿತ ಸಭಾಂಗಣ, ಭೋಜನಾಲಯ ಸಹಿತ ಅತ್ಯಧುನಿಕ ಸೌಲಭ್ಯ ಇದೆ. ಇಬ್ಬರು, ಮೂವರು ತಂಗಬಹುದಾದದ ಕೊಠಡಿಗಳ ಸಹಿತ ಏಕಕಾಲಕ್ಕೆ 120 ಮಂದಿ ವಾಸಿಸಬಹುದಾದ ಹಾಸ್ಟೆಲ್ ಇದಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಡಿ.ವೈ.ಎಸ್.ಪಿ. ಸತೀಶ್ ಕುಮಾರ್, ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.

