ಮಂಜೇಶ್ವರ: ಆಲ್ ಇಂಡಿಯಾ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಏಮ್ಸ್) ಸಂಸ್ಥೆಯನ್ನು ಕಾಸರಗೋಡಿನಲ್ಲಿ ಸ್ಥಾಪಿಸಬೇಕು ಎಂದು ಮಂಜೇಶ್ವರ ೀಕ್ ಬ್ಲಾಕ್ ಪಂಚಾಯತಿ ಆಡಳಿತೆ ಸಮಿತಿ ನಿರ್ಣಯ ಮಂಡಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿದೆ.
ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ನಿರ್ಣಯ ಮಂಡಿಸಿದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಬೆಂಬಲಿಸಿದರು.
ತಲಪ್ಪಾಡಿ ಗಡಿಯಲ್ಲಿ ಮಂಗಳೂರಿಗೆ ಪ್ರವೇಶ ಅನುಮತಿ ಇಲ್ಲದಿರುವುದು ಸಮಸ್ಯೆಯಾಗಿದೆ. ಪ್ರಧಾನವಾಗಿ ರೋಗಿಗಳಿಗೆ ಮಂಗಳೂರಿನ ಪ್ರಧಾನ ಆಸ್ಪತ್ರೆಗೆ ತೆರಳಲಾಗದಿರುವುದು ಸಂಕಷ್ಟ ನೀಡಿದೆ. ಲಾಕ್ ಡೌನ್ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ಲಭಿಸಿದೇ 22 ಮಂದಿ ರೋಗಿಗಳು ಮೃತಪಟ್ಟಿರುವುದು ಮತ್ತು ಅನೇಕ ಮಂದಿ ದುಸ್ಥಿತಿ ಅನುಭವಿಸಬೇಕಾಗಿ ಬಂದಿರುವುದು ಗಂಭೀರ ಸಮಸ್ಯೆಯಾಗಿದೆ. ಎಂಡೋಸಲ್ಫಾನ್ ದುಷ್ಪರಿಣಾಮವನ್ನು ಅನುಭವಿಸುತ್ತಿರುವ ಕಾಸರಗೋಡು ಜಿಲ್ಲೆಯಲ್ಲಿ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ, ಸಂಶೋಧನೆ ಸಂಸ್ಥೆ ಇಲ್ಲ. ಜಿಲ್ಲೆಯ ಆರೋಗ್ಯ ವಲಯದ ಹಿಂದುಳಿಯುವಿಕೆ ಪರಿಹಾರಕ್ಕೆ ಏಮ್ಸ್ ಸಂಸ್ಥೆಯ ಸ್ಥಾಪನೆ ಅನಿವಾರ್ಯ. ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಪೈವಳಿಕೆ ಗ್ರಾಮದಲ್ಲಿ 500 ಎಕ್ರೆ ಜಾಗ ಇದಕ್ಕೆ ಸೂಕ್ತವಾಗಿದೆ ಎಂದವರು ನಿರ್ಣಯದಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ನಿರ್ಣಯಕ್ಕೆ ಸದಸ್ಯರು ಪೂರ್ಣ ಬೆಂಬಲ ನೀಡಿದ್ದಾರೆ. ಮಂಜೇಶ್ವರ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ, ವರ್ಕಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್, ಬ್ಲಾಕ್ ಪಂಚಾಯತಿ ಸದಸ್ಯರಾದ ಬಹರೈನ್ ಮಹಮ್ಮದ್, ಮುಸ್ತಫಾ ಉದ್ಯಾವರ, ಸದಾಶಿವ, ಮಿಸ್‍ಬಾನ, ಪ್ರಸಾದ್ ರೈ ಕಯ್ಯಾರ್, ಕೆ.ಷೀನಾ, ಸಾಯಿರಾ ಬಾನು, ಬಿ.ಎಂ.ಅಶಾಲತಾ, ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಎನ್.ಸುರೇದ್ರನ್, ಇತರ ನಿರ್ವಹಣೆ ಸಿಬ್ಬಂದಿ ಉಪಸ್ಥಿತರಿದ್ದರು.

