ಮಂಜೇಶ್ವರ: ಶಸ್ತ್ರ ಚಿಕಿತ್ಸೆಗೊಳಗಾದ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಒಂದೇ ಒಂದು ಪ.ಪೂ. ಪರೀಕ್ಷೆ ಬರೆಯಲು ಸಾಧ್ಯವಾಗದು ಎಂದೇ ಹತಾಶಳಾಗಿದ್ದ ವಿದ್ಯಾರ್ಥಿನಿಗೆ ವ್ಹೀಲ್ ಚೆಯರ್ ಮೂಲಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ತಲಪ್ಪಾಡಿಯಿಂದ ಕಾರಿನ ಮೂಲಕ ಪರೀಕ್ಷೆಗೆ ತೆರಳಿ ಯಶಸ್ವಿಯಾಗಿ ಪರೀಕ್ಷೆ ಬರೆದ ಘಟನೆ ನಡೆದಿದೆ.
ವರ್ಕಾಡಿಯ ಸುಂಕದಕಟ್ಟೆ ಧರ್ಮನಗರದ ಕೊಲ್ಲಿ ಉದ್ಯೋಗಿಯಾಗಿರುವ ಇಬ್ರಾಹಿಂ ಎಂಬವರ ಪುತ್ರಿ ಉಳ್ಳಾಲ ಹಸ್ರತುಲ್ ವುಮೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಗೆ ಎರಡು ವಾರಗಳ ಹಿಂದೆ ಮನೆಯಲ್ಲಿ ಕತ್ತಿ ಘಾಸಿಯಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಳು. ಈ ಮಧ್ಯೆ ಬಾಕಿ ಉಳಿದಿದ್ದ ಪಿಯು ಆಂಗ್ಲ ಪರೀಕ್ಷೆ ಗುರುವಾರ ನಡೆಯಲಿದ್ದುದರಿಂದ ಪರೀಕ್ಷೆಗೆ ತೆರಳಲು ಅಸಾಧ್ಯವೆಂದೇ ಹತಾಶಳಾಗಿದ್ದಳು. ವಿಷಯ ತಿಳಿದು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹಾಗೂ ಕರ್ನಾಟಕ ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಸ್ಪರ ಚರ್ಚಿಸಿ ವಿದ್ಯಾರ್ಥಿನಿಗೆ ವ್ಹೀಲ್ ಚೆಯರ್ ಮೂಲಕ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಕಾರಿನಲ್ಲಿ ತಲಪಾಡಿ ಗಡಿಗೆ ತಲಪಿದ ಆಯಿಷಾ ಳನ್ನು ಅಧಿಕೃತರು ಪರೀಕ್ಷಿಸಿ ಬಳಿಕ ಅದೇ ಕಾರಿನಲ್ಲಿ ಮಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು. ಎರಡು ವರ್ಷ ಪಟ್ಟ ಶ್ರಮ ವ್ಯರ್ಥವಾಗಿಲ್ಲ ಎಂಬ ಸಂತಸ ಆಯಿಷಾಳದು.


