ಮಂಜೇಶ್ವರ/ಪೆರ್ಲ: ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿದ್ದ ಕರ್ನಾಟಕ ಪದವಿಪೂರ್ವ ಆಂಗ್ಲ ಪರೀಕ್ಷೆ ಗುರುವಾರ ನಡೆದಿದ್ದು, ಕಾಸರಗೋಡು ಜಿಲ್ಲೆಯ ವಿವಿಧೆಡೆಗಳ ನೂರಾರು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲಪಿಸಲು ದ.ಕ. ಜಿಲ್ಲಾಡಳಿತ ಹಾಗೂ ಕರ್ನಾಟಕ ಪ.ಪೂ.ಶಿಕ್ಷಣ ಇಲಾಖೆ ಜಂಟಿಯಾಗಿ ಸೂಕ್ತ ಕ್ರಮಗಳ ಮೂಲಕ ನೆರವಾಗಿದೆ.
ಜಿಲ್ಲೆಯ ವಿವಿಧೆಡೆಗಳಿಂದ 700 ವಿದ್ಯಾರ್ಥಿಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳ ಪರೀಕ್ಷಾ ಕೇಂದ್ರಗಳಿಗೆ ತಲಪಿಸಲು ಕರ್ನಾಟಕ ಸಾರಿಗೆ ಸಂಸ್ಥೆಯ 22 ಬಸ್ ಗಳನ್ನು ಹಾಗೂ ವಿವಿಧ ಕಾಲೇಜುಗಳ ಬಸ್ ಗಳನ್ನು ತಲಪಾಡಿ ಅಂತರ್ ರಾಜ್ಯ ಚೆಕ್ ಪೋಸ್ಟ್ ಬಳಿ ವ್ಯವಸ್ಥೆಗೊಳಿಸಲಾಗಿತ್ತು. ಬೆಳಿಗ್ಗೆ 5.30-6 ಗಂಟೆಯ ವೇಳೆಗೇ ಜಿಲ್ಲೆಯ ವಿವಿಧೆಡೆಗಳ ಪೋಷಕರು ತಮ್ಮ ಮಕ್ಕಳನ್ನು ಗಡಿಯವರೆಗೆ ಕರೆತಂದು ಬಸ್ ಮೂಲಕ ಹತ್ತಿಸಿ ಪರೀಕ್ಷಾ ಕೇಂದ್ರಗಳಿಗೆ ತೆರಳಿದರು. ಪರೀಕ್ಷೆ ಮುಗಿಯುತ್ತಿರುವಂತೆ ಮರಳಿ ಕರೆತರಲಾಯಿತು.
ಗಡಿ ಪ್ರದೇಶಗಳ 1,137 ವಿದ್ಯಾರ್ಥಿಗಳು ದ.ಕ.ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದು ತಲಪ್ಪಾಡಿ ಅಲ್ಲದೆ ಇತರ ಗಡಿ ಪ್ರದೇಶಗಳಾದ ಬಾಯಾರು-ಮುಳಿಗದ್ದೆ, ಅಡ್ಕಸ್ಥಳ-ಸಾರಡ್ಕ, ಕಿನ್ನಿಂಗಾರು, ಕೊಟ್ಯಾಡಿ-ಜಾಲ್ಸೂರುಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾಸರಗೋಡು ಜಿಲ್ಲಾಡಳಿತವು ವಿದ್ಯಾರ್ಥಿಗಳ ಸಂಚಾರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದೆಂದು ತಿಳಿಸಿದ್ದರೂ ಯಾವುದೇ ಸೌಕರ್ಯ ಏರ್ಪಡಿಸಿರಲಿಲ್ಲ ಎಂದು ತಿಳಿದುಬಂದಿದೆ.
ಸಂಚಾರ ತಡೆ:
ಪಿಯು ಪರೀಕ್ಷೆ ಬರೆಯಲು ತಮ್ಮ ಮಕ್ಕಳನ್ನು ಕರೆತಂದ ವಾಹನಗಳು ಒಮ್ಮಿಂದೊಮ್ಮೆಗೆ ಜಮಾವಣೆಗೊಂಡಿದ್ದರಿಂದ ಗುರುವಾರ ಬೆಳಿಗ್ಗೆ ಅಂತರಾಜ್ಯ ಗಡಿ ತಲಪಾಡಿಯಲ್ಲಿ ವ್ಯಾಪಕ ವಾಹನ ದಟ್ಟಣೆ ಕಂಡುಬಂತು. ಮೇಲಿನ ತಲಪಾಡಿಯಲ್ಲಿ ವಿದ್ಯಾರ್ಥಿಗಳನ್ನು ಕರೆತಂದ ವಾಹನಗಳೂ, ಕೆಳಗಿನ ತಲಪಾಡಿಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲು ಆಗಮಿಸಿದ ವಾಹನಗಳ ದಟ್ಟಣೆ ಅಲ್ಪಹೊತ್ತು ಗೊಂದಲಗಳಿಗೂ ಕಾರಣವಾಯಿತು.




