ಬದಿಯಡ್ಕ: ಕೊರೊನಾ ಹಿನ್ನೆಲೆಯಲ್ಲಿ ಅಸಮರ್ಪಕ ವ್ಯವಸ್ಥೆಯ ಮಧ್ಯೆ ಸರ್ಕಾರ ಆನ್‍ಲೈನ್ ಶಿಕ್ಷಣ ಆರಂಭಿಸಿದೆ. ಆದರೆ ಇಂದಿಗೂ ಗ್ರಾಮೀಣ ಮಟ್ಟದಲ್ಲಿ ತಂತ್ರಜ್ಞಾನದ ಕೊರತೆ ಕಾಡುತ್ತಿದ್ದು ಈ ಕಾರಣದಿಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೈದಿರುವುದು ಕಳವಳಕಾರಿಯಾಗಿದ್ದು ಮುಂದೆ ಎಂದಿಗೂ ಇಂತಹ ಘಟನೆಗಳು ಮರುಕಳಿಸದಂತಹ ಸ್ಥಿತಿಯನ್ನು ಸರ್ಕಾರ ಖಾತ್ರಿಪಡಿಸಬೇಕು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಆನ್‍ಲೈನ್ ಶಿಕ್ಷಣ ವ್ಯವಸ್ಥೆ ತಲಪುವಲ್ಲಿ ಎಲ್ಲಾ ಸೌಕರ್ಯಗಳನ್ನೂ ಸರ್ಕಾರ ಅತಿಶೀಘ್ರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ಸ್ ಕಾರಡ್ಕ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಸೋಮವಾರ ಬದಿಯಡ್ಕದಲ್ಲಿರುವ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನಾ ಧರಣಿ ನಡೆಯಿತು.
ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರನ್ ಎಂ.ಸಿ.ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ, ಆನಂದ ಕೆ.ಮವ್ವಾರು, ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ನಾರಾಯಣ ಮಣಿಯಾಣಿ, ಗಂಗಾಧರ ಗೋಳಿಯಡ್ಕ ಉಪಸ್ಥಿತರಿದ್ದು ಮಾತನಾಡಿದರು.


