ತಿರುವನಂತಪುರ: ಕೇಂದ್ರ ಗುಪ್ತಚರ ಸಂಸ್ಥೆಯ ಪ್ರಕಾರ 2017 ರಿಂದ 2019 ರ ಮಧ್ಯೆ 149 ಮಂದಿಗಳು ಕೇರಳದಿಂದ ಐಸಿಸ್‍ಗೆ ಸೇರ್ಪಡೆಗೊಂಡಿದ್ದಾರೆಂಬ ಅಂಶ ತಿಳಿದುಬಂದಿದೆ. ಈ ಪೈಕಿ 100 ಮಂದಿ ತಮ್ಮ ಕುಟುಂಬಗಳೊಂದಿಗೆ ಹೋಗಿದ್ದರು ಎಂದು ವರದಿ ಹೇಳುತ್ತದೆ. ಪ್ರಸ್ತುತ ಅವರೊಂದಿಗೆ ಸಂಪರ್ಕದಲ್ಲಿರುವವರು ತೀವ್ರ ನಿರೀಕ್ಷಣೆಯಲ್ಲಿದ್ದಾರೆ. ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.
ರಾಜ್ಯದಿಂದ ಐಸಿಸ್ ಗೆ ತೆರಳಿರುವ 149 ಜನರು ಕಾಸರಗೋಡು, ಕಣ್ಣೂರು, ವಯನಾಡ್, ಮಲಪ್ಪುರಂ, ಎರ್ನಾಕುಳಂ, ಇಡುಕ್ಕಿ, ಕೊಲ್ಲಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ. ಕೇಂದ್ರ ಗುಪ್ತಚರ ಸಂಸ್ಥೆಯ ಪ್ರಕಾರ ಅವರೆಲ್ಲ 2017, 2018 ಮತ್ತು 2019 ರಲ್ಲಿ ಐಎಸ್ ಗೆ ಸೇರ್ಪಡೆಗೊಂಡಿರುವರು. ಇದಲ್ಲದೆ ಮೂವರು ವಯನಾಡು ನಿವಾಸಿಗಳು ಇರಾನ್‍ಗೆ ತೆರಳಿ ಬಳಿಕ ಊರಿಗೆ ಮರಳಿರುವರು. ಮೂವತ್ತೆರಡು ಜನರು ಗಲ್ಫ್ ದೇಶಗಳಲ್ಲಿ ಬಂಧಿಸಿ ಆರು ತಿಂಗಳ ಜೈಲುವಾಸದ ಬಳಿಕ ಊರಿಗೆ ಗಡೀಪಾರು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಐಎಸ್ ಕೇಂದ್ರಕ್ಕೆ ಆಗಮಿಸಿದ ಯುವಕನೋರ್ವ ಅಲ್ಲಿಯ ವಿದ್ಯಮಾನ, ಸಂಕಷ್ಟಗಳ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಗೆ ಟೆಲಿಗ್ರಾಮ್ ಸಂದೇಶ ಕಳಿಸಿದ್ದು ಇದನ್ನು ಆದರಿಸಿ ಗುಪ್ತಚರ ಸಂಸ್ಥೆ ವಿದೇಶಿ ಗುಪ್ತಚರ ಸಂಸ್ಥೆಯ ನೆರವಿನೊಂದಿಗೆ ತನಿಖೆ ಆರಂಭಿಸುತ್ತಿರುವಂತೆ ಸಂದೇಶ ನೀಡಿದ ಯುವಕನನ್ನು ಐಎಸ್ ಕೊಂದು ಹಾಕಿದೆ ಎಂದು ತಿಳಿದುಬಂದಿದೆ. ಕೊಲ್ಲಿಯಲ್ಲಿ ಬಂಧಿತರಾದವರು ಇಸ್ತಾಂಬುಲ್‍ನ ಆರಾಧನಾಲಯ ಭೇಟಿಗೆ ತೆರಳುತ್ತಿದ್ದಾಗ ಬಂಧಿತರಾಗಿ ವಿಷಯಗಳು ಹೊರಬರಲು ಕಾರಣವಾಯಿತು. ಕಳೆದ ವರ್ಷದಿಂದ ಗಲ್ಫ್ ರಾಷ್ಟ್ರಗಳು ಐಎಸ್ ಉಗ್ರಗಾಮಿ ಗುಂಪಿನ ಮೇಲೆ ತೀವ್ರ ನಿಗಾ ಇರಿಸಿ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಐಎಸ್ ನೇಮಕಾತಿ ನಡೆಸಿಲ್ಲ ಎಂದು ತಿಳಿಯಲಾಗಿದೆ.
ಯುಎನ್ ವರದಿಯ ಆಧಾರದ ಮೇಲೆ ಗುಪ್ತಚರ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ದಳ ಕೇರಳದಲ್ಲಿ ಐಎಸ್ ಇರುವ ಬಗ್ಗೆ ತನಿಖೆ ನಡೆಸಲಿದೆ ಎಂದು ಡಿಜಿಪಿ ಲೋಕನಾಥ ಬೆಹ್ರಾ ಹೇಳಿದ್ದಾರೆ. ಅವರ ಕಣ್ಮರೆಗೆ ಸಂಬಂಧಿಸಿದಂತೆ 2016 ರ ತನಿಖೆಯಲ್ಲಿ ಕೇರಳದ 24 ಜನರು ಐಸಿಸ್ ಸೇರಿದ್ದಾರೆ ಎಂದು ಎನ್ ಐ ಎ ಕಂಡುಹಿಡಿದಿದೆ. ಕೆಲವರು ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಆದರೆ ಖಚಿತಪಡಿಸಲು ಸಾಧ್ಯವಾಗಲಿಲ್ಲ.


