ಮಂಜೇಶ್ವರ: ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಲಾಕ್ ಡೌನ್ ಸಮಯದಲ್ಲಿ ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವರು.
ಕರೋನ ಮಹಾಮಾರಿಯಿಂದ ಸ್ತಬ್ಧವಾಗಿರುವ ಶಾಲೆಯು ಸರ್ಕಾರದ ಸುಭೀಕ್ಷ ಕೇರಳ ಯೋಜನೆಯಂತೆ ಸ್ಥಳೀಯವಾಗಿ ತರಕಾರಿ ಕೃಷಿ ಮಾಡಲು ಪ್ರೇರೇಪಣೆಯಾಗಿದೆ. ಶಾಲೆಯಲ್ಲಿ ತರಕಾರಿ ಕೃಷಿ ಮಾಡುವ ಯೋಜನೆಗೆ ಶ್ರಮದಾನದ ಮೂಲಕ ಬಲತುಂಬಿದವರು ಶಾಲಾ ಹಳೆ ವಿದ್ಯಾರ್ಥಿಗಳು.
ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಸಕ್ರಿಯವಾಗಿರುವ ಕುಳೂರು ಶಾಲೆಯಲ್ಲಿ ಈ ವರ್ಷದ ತರಕಾರಿ ಕೃಷಿ ತೋಟ ನಿರ್ಮಾಣದಲ್ಲಿ ಪಾಲ್ಗೊಂಡು ಸೈಎನಿಸಿ ಮಾದರಿಯಾದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು ಶ್ರಮದಾನದ ನೇತೃತ್ವ ವಹಿಸಿದ್ದರು. ಶ್ರಮದಾನದಲ್ಲಿ ಪಾಲ್ಗೊಂಡವರ ಮಧ್ಯಾಹ್ನದ ಊಟಕ್ಕೆ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲರವರು ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.
ಶಾಲಾವರಣದೊಳಗಿನ ಸುಮಾರು 50 ಸೆಂಟ್ ಗಿಂತಲೂ ಮಿಕ್ಕಿದ ಖಾಲಿ ಸ್ಥಳದಲ್ಲಿ ಇದೀಗ ವಿವಿಧ ತರಕಾರಿ ಕೃಷಿಯನ್ನು ಸಾವಯವ ರೀತಿಯಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ.


