ತಿರುವನಂತಪುರ: ರಾಜತಾಂತ್ರಿಕ ಲಗೇಜ್ ಬ್ಯಾರಿಗೇಶ್ ಮೂಲಕ ಅಕ್ರಮ ಚಿನ್ನ ಕಳ್ಳಸಾಗಣೆಯ ನಿರ್ಣಾಯಕ ವಿವರಗಳು ಹೊರಬಂದಿದ್ದು ತೀತ್ರ ಕಳವಳಕ್ಕೆ ಕಾರಣವಾಗಿದೆ. ಕಸ್ಟಮ್ಸ್ ಅಧಿಕಾರಿಗಳ ನಿರಂತರ ತಪಾಸಣೆಯಲ್ಲಿ ಸ್ವಪ್ನಾ ಈವರೆಗೆ 23 ಬಾರಿ ಚಿನ್ನ ಕಳ್ಳಸಾಗಣೆ ಮಾಡಿರುವುದಾಗಿ ತಿಳಿಯಲಾಗಿದೆ.
ತಿರುವನಂತಪುರ ವಿಮಾನ ನಿಲ್ದಾಣಕ್ಕೆ 152 ಕೆಜಿ ಚೀಲಗಳು ತಲುಪಿದ್ದು, ಪ್ರಸ್ತುತ ಬಂಧನಕ್ಕೊಳಗಾಗಿದ್ದ ಸರಿತ್ ಅವರು ಇವೆಲ್ಲವನ್ನೂ ವಿಲೇವಾರಿಯಲ್ಲಿ ನೆರವಾಗಿರುವರೆಂದು ತಿಳಿದುಬಂದಿದೆ. ವರದಿಗಳ ಪ್ರಕಾರ, 2019 ರ ಜುಲೈ 9 ರಿಂದ ಅಕ್ರಮ ಚಿನ್ನ ಸಾಗಾಣಿಕೆಯ ಮೂಲಕ ಬರಲು ಪ್ರಾರಂಭಿಸಿತು ಎಂದು ತನಿಖೆಯಿಂದ ತಿಳಿದುಬಂದಿದೆ.
ಫೈಸಲ್ ಫರೀದ್ ಅವರಂತಹ ಅನೇಕ ಜನರು ಇಂತಹ ರಾಜತಾಂತ್ರಿಕ ಸಾಮಾನುಗಳ ಮೂಲಕ ಚಿನ್ನವನ್ನು ಕಳುಹಿಸಿದ್ದಾರೆ ಎಂಬ ವರದಿಗಳಿವೆ. ತನಿಖೆ ನಡೆಯುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಉಲ್ಲೇಖಿಸಿವೆ.
ಇದೇ ವೇಳೆ ಚಿನ್ನದ ಕಳ್ಳಸಾಗಣಿಕೆಗೂ ಮೊದಲು ಡೆಮ್ಮಿ ಚೀಲಗಳನ್ನು ಕಳಿಸಿ ಪರೀಕ್ಷಿಸಲಾಗಿತ್ತು. ಈ ವೇಳೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕೃತರಿಂದ ಯಾವುದೇ ತನಿಖೆ ನಡೆಯದಿದ್ದರಿಂದ ಆ ಭರವಸೆಯಿಂದ ಬಳಿಕ ಸಾಗಾಣಿಕೆಗೆ ಆರಂಭಿಸಲಾಯಿತೆಂಬ ಗಂಭೀರ ಕಳವಳಕಾರಿ ಅಂಶ ಬಯಲಾಗಿದೆ. ಇದುವರೆಗೆ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಕೇವಲ 30 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ರಾಜತಾಂತ್ರಿಕ ಸಾಮಾನುಗಳ ಮೂಲಕ 200 ಕೆಜಿಗಿಂತ ಹೆಚ್ಚು ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂಬ ಅಂಶ ಹೊರಬೀಳುವುದರೊಂದಿಗೆ ವಿಮಾನ ನಿಲ್ದಾಣಗಳ ಸುರಕ್ಷತೆ, ನಿಯಂತ್ರಣಗಳ ಬಗ್ಗೆ ಸಂಶಗಳು ಮೂಡಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವರದಿಯಾಗಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಈವರೆಗೆ 15 ಆರೋಪಿಗಳನ್ನು ಬಂಧಿಸಲಾಗಿದೆ. ಹನ್ನೆರಡು ಜನರನ್ನು ಕಸ್ಟಮ್ಸ್ ಬಂಧಿಸಿದೆ. ದೇಶದಲ್ಲೇ ಅತೀದೊಡ್ಡ ಚಿನ್ನ ಕಳ್ಳಸಾಗಣೆ ಪ್ರಕರಣ ಇದಾಗಿದೆ ಎಂದು ಉಲ್ಲೇಖಿಸಲಾಗಿದೆ.


