ಕಾಸರಗೋಡು: ಜಿಲ್ಲೆಯ ಮೂಲಕ ಹಾದುಹೋಗುವ ಹಣ್ಣುಗಳು, ತರಕಾರಿಗಳು ಮತ್ತು ಮೀನುಗಳನ್ನು ಸಾಗಿಸುವ ಸರಕು ವಾಹನಗಳ ಸಂಚಾರ ನಿರ್ಬಂಧಗಳನ್ನು ನಿಬಂಧನೆಗನುಸಾರ ಹೊಸತಾಗಿ ರೂಪೀಕರಿಸಲಾಗಿದೆ.
ಕರ್ನಾಟಕದಿಂದ ಜಿಲ್ಲೆಗೆ ಆಗಮಿಸುವ ತರಕಾರಿಗಳು, ಹಣ್ಣುಗಳು ಮತ್ತು ಮೀನು ಸಾಗಾಟ ವಾಹನಗಳು ಜಿಲ್ಲಾ ಗಡಿಯಲ್ಲಿ ನಿಲ್ಲಿಸಿ ಇತರ ವಾಹನಗಳಿಗೆ ವರ್ಗಾಯಿಸಿ ಈಚೆಗೆ ತಲಪಿಸಬೇಕು. ಆರೋಗ್ಯ ಇಲಾಖೆಯ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ಕೈಗವಸುಗಳು, ಮಾಸ್ಕ್ ಗಳು ಮತ್ತು ಸ್ಯಾನಿಟೈಜರ್‍ಗಳನ್ನು ಬಳಸಿದ ನಂತರವೇ ಸರಕುಗಳನ್ನು ಲೋಡ್ ಮಾಡಿ ಇಳಿಸಬೇಕು. ಇಂತಹ ನಿಬಂಧನೆಗಳನ್ನು ಪಾಲಿಸುವಲ್ಲಿ ಅಸಡ್ಡೆ ತೋರಿಸಿದವರ ವಿರುದ್ದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗುವುದು ಮತ್ತು ವಾಹನವನ್ನು ವಶಪಡಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಸರಕುಗಳೊಂದಿಗೆ ಕರ್ನಾಟಕದಿಂದ ಬರುವವರಿಗೆ ಜಿಲ್ಲೆಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಜಿಲ್ಲಾ ಗಡಿಯಲ್ಲಿ ವಾಹನದಲ್ಲಿ ತರಕಾರಿಗಳನ್ನು ಸಾಗಿಸುವ ವಾಹನ ಚಾಲಕರು ಮತ್ತು ಇತರ ಸಿಬ್ಬಂದಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರಕ್ಕೊಮ್ಮೆ ಕೋವಿಡ್ ಸೋಂಕು ಇಲ್ಲ ಎಂಬ ಸರ್ಟಿಫಿಕೇಟ್ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿರುವರು.


