ಕಾಸರಗೋಡು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿದೆ.ಈ ನಿಟ್ಟಿನಲ್ಲಿ ತೀವ್ರ ಜಾಗ್ರತೆ ಅಗತ್ಯ. ಜಾಗೃತಿ ಪಾಲಿಸದೇ ಇದ್ದಲ್ಲಿ ಗಂಭೀರ ಸ್ಥಿತಿಗೆ ನಾಡು ತಲಪಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ದಿನವೊಂದಕ್ಕೆ ನೂರಕ್ಕೂ ಅಧಿಕ ರೋಗಿಗಳು ವರದಿಯಾಗುವ ಹಂತಕ್ಕೆ ಸೋಂಕು ಹೆಚ್ಚಳ ನಡೆಯುತ್ತಿದೆ. ಕಳೆದ 2 ವಾರಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಸಾಮಾಜಿಕ ಸಂಪರ್ಕ ಮೂಲಕ ಸೋಂಕು ಅಧಿಕಗೊಳ್ಳುತ್ತಿರುವುದು ಭೀತಿಗೆ ಕಾರಣವಾಗಿದೆ. ಜಿಲ್ಲೆಯ ಉತ್ತರ ಭಾಗದ ಪ್ರದೇಶಗಳಲ್ಲಿ ಈ ಸ್ಥಿತಿ ಹೆಚ್ಚಿದೆ. 5 ಕ್ಲಸ್ಟರ್ ಏರಿಯಾಗಳನ್ನು ಜಿಲ್ಲೆಯಲ್ಲಿ ಪತ್ತೆ ಮಾಡುವುದಾಗಿ ತಿಳಿಸಿರುವ ಅವರು ಕಾಸರಗೋಡು ಮಾರುಕಟ್ಟೆ, ಚೆರ್ಕಳ ಫ್ಯೂನರಲ್, ಮಂಗಲ್ಪಾಡಿಯ ವಾರ್ಡ್ ಮೂರು, ಕುಂಬಳೆ ಮಾರುಕಟ್ಟೆ, ಹೊಸಂಗಡಿ ಲ್ಯಾಬ್ ಈ ಕ್ಲಸ್ಟರ್ ಗಳಾಗಿವೆ. ಚುರುಕಿನ ಪ್ರತಿರೋಧ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸಂಪರ್ಕ ಮೂಲ ಪತ್ತೆಯೇ ಆಗದಿರುವ 20 ಸೋಂಕಿತರು:
ಸಂಪರ್ಕದ ಮೂಲವೇ ತಿಳಿಯದೆ ಇರುವ ಸುಮಾರು 20 ಸೋಂಕಿತರು ವರದಿಯಾಗಿವೆ. ಉತ್ತರ ವಲಯದಲ್ಲಿ ಪಂಚಾಯತ್ ಗಳಲ್ಲಿ ಸಂಪರ್ಕ ಮೂಲಕ ಸೋಂಕು ಅಧಿಕವಾಗಿ ಹರಡುತ್ತಿದೆ. ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನೂ ಪಾಲಿಸುವಲ್ಲಿ ಕೆಲವರು ನಡೆಸಿದ ಲೋಪವೇ ಈ ದುಸ್ಥಿತಿಗೆ ಕಾರಣ ಎಂಬುದು ಪತ್ತೆಯಾಗಿದೆ. ಮೂರನೇ ಹಂತದ ಪ್ರತಿರೋಧ ಚಟುವಟಿಕೆಗಳು ಆರಂಭಗೊಂಡು 35 ದಿಗಳ ವರೆಗೆ ಸಾಮಾಜಿಕ ಸಂಪರ್ಕ ನಡೆದಿರಲಿಲ್ಲ. ನಂತರ ವಿವಾಹ ಸಹಿತ ವಿವಿಧ ಕಾರಣಗಳಿಂದ ಗಣನೆ ಮೀರಿ ಜನ ಸೇರತೊಡಗಿದ್ದು ಇತ್ಯಾದಿ ಸಮಸ್ಯೆಗೆ ಕಾರಣ ಎಂಬುದು ಪತ್ತೆಯಾಗಿದೆ.
ಮರಣ ಸಂಖ್ಯೆ ಹೆಚ್ಚಳದ ಭೀತಿ:
ಸೋಂಕು ಹೆಚ್ಚಳದ ಜೊತೆಯಲ್ಲಿ ಮರಣ ಸಂಖ್ಯೆ ಅಧಿಕವಾಗುವ ಭೀತಿಯೂ ಕಂಡುಬರುತ್ತಿದೆ. ಜಿಲ್ಲೆಯಲ್ಲಿ 21 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲಿದೆ ಎಂಬುದೂ ಆತಂಕಕ್ಕೆ ಕಾರಣವಾಗಿದೆ. ಗಡಿ ಪ್ರದೇಶಗಳಲ್ಲಿ ನುಸುಳುಕೋರರು ಜಿಲ್ಲೆಗೆ ಪ್ರವೇಶಿಸುತ್ತಿರುವುದು ಈಗಲೂ ನಡೆಯುತ್ತಿರುವುದು ಭೀತಿ ಹೆಚ್ಚಿಸುತ್ತಿದೆ.
ಜನ ಬೆಂಬಲ ಅಗತ್ಯ:
ಜನ ಸಹಭಾಗಿಗಳಾದರೆ ಮಾತ್ರ ಪ್ರತಿರೋಧ ಚಟುವಟಿಕೆಗಳು ಸಫಲಗೊಳ್ಳಲು ಸಾಧ್ಯ ಎಂದು ಜಿಲ್ಲಾ ವೈದ್ಯಾಧಿಕಾರಿ ನುಡಿದರು. ದೈಹಿಕ ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಸಹಿತ ಬದುಕುವುದು ಸಹಿತ ಎಲ್ಲ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ರೀತಿಯ ಸಮಾರಂಭಗಳನ್ನು ಕೈಬಿಡಬೇಕು. ಜಿಲ್ಲೆಯನ್ನು ಸಹಜ ಸ್ಥಿತಿಗೆ ಮರಳಿ ತರಲು ಸಾರ್ವಜನಿಕರ ಸಹಕಾರ ಅತೀ ಅಗತ್ಯ ಎಂದವರು ತಿಳಿಸಿರುವರು.


