ಕಾಸರಗೋಡು: ಕಾಸರಗೋಡು ಜಿಲ್ಲಾ ಮಟ್ಟದ ಕೃಷಿಕ ದಿನಾಚರಣೆ ಸೋಮವಾರ ಜರಗಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಬ್ಲೋಕ್ ಮಟ್ಟದಲ್ಲಿ ಆರಂಭಿಸಲಾಗುವ ಕೃಷಿ ವಿಜ್ಞಾನ ಕೇಂದ್ರಗಳ ಚಾಲನೆಯೂ ಈ ವೇಳೆ ಜರಗಿತು.
ಈ ವೇಳೆ ಮಾತನಾಡಿದ ಅವರು ಕೃಷಿ ಮತ್ತು ತತ್ಸಂಬಂಧಿ ವಲಯಗಳಿಲ್ಲದೆ ನಮಗೆ ಅಸ್ತಿತ್ವವಿಲ್ಲ. ನಮ್ಮ ಜೀವ ಉಳಿಕೆಗಾಗಿ ತನ್ನ ರಕ್ತವನ್ನೇ ಬೆವರಾಗಿ ಸುರಿಸಿ ದುಡಿವ ಕೃಷಿಕರು ಈ ನಾಡಿನ ಸಂರಕ್ಷಕರು ಎಂದು ಅಭಿಪ್ರಾಯಪಟ್ಟರು.
ಕಳೆದ 28 ವರ್ಷಗಳಿಂದ ಸಿಂಹ ಮಾಸ ಒಂದನೇ ತಾರೀಕಿನಂದು ಕೃಷಿಕ ದಿನಾಚರಣೆ ನಡೆಸಲಾಗುತ್ತಿದೆ. ಕೃಷಿಭವನಗಳ ರಚನೆ ಕೃಷಿ ವಲಯದಲ್ಲಿ ಬಲುದೊಡ್ಡ ಚೈತನ್ಯ ಒದಗಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಕೊಡುಗೆ ಕೃಷಿ ವಲಯದ ಅಭಿವೃದ್ಧಿಯಲ್ಲಿ ಗಮನಾರ್ಹವಾದುದು. ಕೋವಿಡ್ ಹಿನ್ನೆಲೆಯಲ್ಲೂ ಕೃಷಿ ವಲಯಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಸುಭಿಕ್ಷ ಕೇರಳಂ ಯೋಜನೆ ಅಭಿನಂದನಾರ್ಹ ಕೊಡುಗೆ ನೀಡುತ್ತಿದೆ. ಜನತೆಯನ್ನು ಕೃಷಿಯತ್ತ ಸೆಳೆಯುವಲ್ಲಿ ಈ ಕಾಲಾವಧಿ ನಮಗೆ ಪಾಠ ಕಲಿಸಿದೆ ಎಂದವರು ನುಡಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತನಾಡಿ ಸುಭಿಕ್ಷ ಕೇರಳಂ ಯೋಜನೆಯ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಬೃಹತ್ ಸಾಧನೆಗಳು ನಡೆದಿವೆ. ಫಾರ್ಮರ್ ಪೆÇ್ರಡ್ಯೂಸರ್ ಕಂಪನಿಗಳನ್ನು, ರಖಂ ವ್ಯಾಪಾರ ಮಾರುಕಟ್ಟೆ ಇತ್ಯಾದಿಗಳ ಆರಂಭಕ್ಕೂ ಜಿಲ್ಲೆ ಸಜ್ಜಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 3100 ಎಕ್ರೆ ಜಾಗವನ್ನು ನೂತನವಾಗಿ ಕೃಷಿಗಾಗಿ ಸಿದ್ಧಗೊಂಡಿದೆ. ಈ ಮೂಲಕ 10 ಸಾವಿರ ಮಂದಿ ಕೃಷಿ ವಲಯತ್ತ ಬಂದಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಯಕ್ಷ ಹರ್ಷಾದ್ ವರ್ಕಾಡಿ, ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್, ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಕಾಞಂಗಾಡ್, ಪರಪ್ಪ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಆನ್ ಲೈನ್ ರೂಪದಲ್ಲಿ ಭಾಗವಹಿಸಿದರು.
ಕೃಷಿ ಸಹಾಯಕ ನಿರ್ದೇಶಕಿ ಮೀನಾರಾಣಿ ಸ್ವಾಗತಿಸಿ, ಎಸ್.ಲಕ್ಷ್ಮೀ ದೇವಿ ವಂದಿಸಿದರು.

