ಪೆರ್ಲ: ಪ್ರಾಚೀನ ಕಾಲದ ಅಪೂರ್ವ ತಾಳೆಗರಿ ಗ್ರಂಥವನ್ನು ಪಡ್ರೆ ಸೂರಂಬೈಲು ಕಟ್ಟೆಯ ಪ್ರಭಾಕರ ಆಚಾರ್ಯ ಇವರು ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯಕ್ಕೆ ಇತ್ತೀಚೆಗೆ ಸಮರ್ಪಿಸಿದರು.
ತಾಳೆಗರಿ ಗ್ರಂಥವು ಪ್ರಭಾಕರ ಆಚಾರ್ಯ ಅವರ ಅಜ್ಜ ದಿವಂಗತ ವಿಷ್ಣು ಆಚಾರ್ಯ ಇವರಿಂದ ಬಳುವಳಿಯಾಗಿ ಬಂದಿದ್ದು ವಿಷ್ಣು ಆಚಾರ್ಯ 1987 ರಲ್ಲಿ ನಿಧನರಾಗಿದ್ದರು. ಬಳಿಕ ಈ ತಾಳೆಗರಿ ಗ್ರಂಥವು ಇವರ ಪುತ್ರ ದಿ. ಎಂ.ಕೆ ಬಾಲಕೃಷ್ಣರವರ ಆತ್ಮೀಯ ಮಿತ್ರರೂ ನಾಟಕ ಕಲಾವಿದರಾದ ವಿಠಲ ಆಚಾರ್ಯ ಇವರ ಕೈವಶವಿದ್ದು ಅವರ ಮರಣದ ಬಳಿಕ ಪುತ್ರ ಪ್ರಭಾಕರ ಆಚಾರ್ಯರಿಗೆ ಲಭ್ಯವಾಯಿತು. ಕಳೆದ 20 ವರ್ಷಗಳಿಂದ ಈ ತಾಳೆಗರಿ ಗ್ರಂಥವನ್ನು ಜೋಪಾನವಾಗಿ ಮನೆಯಲ್ಲಿ ಸಂಗ್ರಹಿಸಿದ್ದರು. ಅತೀ ಪುರಾತನವಾದ ಈ ತಾಳೆಗರಿ ಗ್ರಂಥದಿಂದ ಹೆಚ್ಚಿನ ಮಾಹಿತಿ ಸಂಶೋಧನೆಯ ಮೂಲಕ ದೊರಕಬೇಕಾಗಿದೆ.
ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯಕ್ಕೆ ನೀಡುವುದರ ಮೂಲಕ ಸಂಶೋಧನೆಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಪ್ರಭಾಕರ ಆಚಾರ್ಯರು ತಾಳೆಗರಿ ಗ್ರಂಥವನ್ನು ಗ್ರಂಥಾಲಯದ ಕಾರ್ಯದರ್ಶಿ, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲು ಇವರಿಗೆ ಹಸ್ತಾಂತರಿಸಿದರು. ಗಂಥಾಲಯದ ಉಪಾಧ್ಯಕ್ಷೆ, ಎಣ್ಮಕಜೆ ಗ್ರಾಮ ಪಂಚಾಯತಿ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ, ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿ. ಡಿ.ಎಸ್ ಉಪಾಧ್ಯಕ್ಷೆ ಶಶಿಕಲಾ ಕೆ, ಗ್ರಂಥಾಲಯದ ಕಾರ್ಯಕಾರಿ ಸಮಿತಿ ಸದಸ್ಯ ರವಿ ವಾಣೀನಗರ, ಮಹೇಶ್ ಕೆ ಬೈರಡ್ಕ ಉಪಸ್ಥಿತರಿದ್ದರು.



