ಕಾಸರಗೋಡು: ಸುದೀರ್ಘ ಕಾಲದ ನಂತರ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66ರ ಷಟ್ಪಥ ಹಾದಿಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಲಾಯಿತು.
ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರು ದೆಹಲಿಯಿಂದ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಿಂದ ಜಂಟಿಯಾಗಿ ವಿಡಿಯೋ ಕಾನ್‍ಫರೆನ್ಸ್ ಮೂಲಕ ಕಾಮಗಾರಿ ಉದ್ಘಾಟಿಸಿದರು. ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್, ಕೇರಳ ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಜಿ.ಸುಧಾಕರನ್ ಉಪಸ್ಥಿತರಿದ್ದರು.
ತಲಪ್ಪಾಡಿಯಿಂದ ಚೆರ್ಕಳ ವರೆಗಿನ 39ಕಿ.ಮೀ ಹಾಗೂ ಚೆರ್ಕಳದಿಂದ ನೀಲೇಶ್ವರ ವರೆಗಿನ 37.27ಕಿ.ಮೀ ರಸ್ತೆಯನ್ನು ಷಟ್ಪಥ ಯೋಜನೆಯಲ್ಲಿ ಒಳಪಡಿಸಿ ಅಭಿವೃದ್ಧಿಪಡಿಸಲಾಗುವುದು. ಬೈಂದೂರಿನಿಂದ ತಲಪ್ಪಾಡಿ ವರೆಗಿನ ಹೆದ್ದಾರಿ ಅಭಿವೃದ್ಧಿ ಯೋಜನೆ ಬಹುತೇಕ ಪೂರ್ತಿಗೊಂಡು ವರ್ಷ ಕಳೆದರೂ, ಕೇರಳದಲ್ಲಿ ಕಾಮಗಾರಿ ಒಂದಲ್ಲ ಒಂದು ಕಾರಣದಿಂದ ವಿಳಂಬವಾಗಿ ಸಾಗುತ್ತಾ ಬಂದಿದೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಒಟ್ಟು 204 ಕಿ.ಮೀ ರಸ್ತೆ ಅಭಿವೃದ್ಧಿಗೊಳ್ಳಲಿದ್ದು, ಇದಕ್ಕಾಗಿ 12682ಕೋಟಿ ರೂ. ಮೀಸಲಿರಿಸಲಾಗಿದೆ.




