HEALTH TIPS

ಅನುಭವ ಹಾಗೂ ಕೌಟುಂಬಿಕ ಬದುಕನ್ನು ಕಟ್ಟಿಕೊಡುವಲ್ಲಿ ಯೋಧಗಾಥೆ ಕೃತಿ ವಿಶಿಷ್ಟವಾದುದು-ಪ್ರಾಂಶುಪಾಲ ಡಾ.ಉದಯಕುಮಾರ್- ಪರಿಣಿತ ರವಿ ಎಡನಾಡು ಅವರ ಯೋಧಗಾಥೆ ಕೃತಿ ಬಿಡುಗಡೆಗೊಳಿಸಿ ಅಭಿಮತ

  

         ಕೊಚ್ಚಿ: ಕನ್ನಡ ಸಾರಸ್ವತ ಲೋಕದಲ್ಲಿ ಅನೇಕಾನೇಕ ಕೃತಿಗಳು ಮೂಡಿಬರುತ್ತಿದ್ದರೂ ರಾಷ್ಟ್ರದ ಹೆಮ್ಮೆಯಾಗಿರುವ ಸೈನ್ಯ, ಅಲ್ಲಿಯ ಬದುಕಿನ ವಿವರಗಳನ್ನು ಕಟ್ಟಿಕೊಡುವ ಕೃತಿಗಳು ವಿರಳ. ಕಾಸರಗೋಡಿನಲ್ಲಿ ಹುಟ್ಟಿ  ಕಾಶ್ಮೀರದ ಗಡಿಯಲ್ಲಿ ನಿಂತು ಭಾರತದ ಗೆಲುವಿನ ಬಾವುಟವನ್ನು ಹಾರಿಸಿದ ಯಶೋಗಾಥೆಯ ಮಿಂಚು ಈ ಕೃತಿಯಲ್ಲಿ ಅನನ್ಯವಾಗಿ ಅಡಕವಾಗಿದೆ.  ಆಕರ್ಷಕವಾದ ಆರಂಭ, ಸೈನಿಕ ಬದುಕಿನ ಭಾವನಾತ್ಮಕ ಸಂಗತಿಗಳು, ಮಾನವೀಯ ಭಾವುಕ ಕ್ಷಣಗಳು, ಕೌಟುಂಬಿಕ ವಾತ್ಸಲ್ಯದ ವಿವರಣೆಗಳನ್ನು ಪರಿಣಿತ ಅವರು ಕೃತಿಯೊಳಗೆ ಸೊಗಸಾಗಿ ಬೆಸೆದು ಅತ್ಯಂತ ಭಾವನಾತ್ಮಕಗೊಳಿಸಿದ್ದಾರೆ ಎಂದು ಮಂಗಳೂರಿನ  ವಿಶ್ವವಿದ್ಯಾಲಯ ಕಾಲೇಜು ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

       ಎರ್ನಾಕುಳಂನಲ್ಲಿ ವಾಸವಾಗಿರುವ ಶಿಕ್ಷಕಿ, ಬರಹಗಾರ್ತಿ ಮೂಲತಃ ಕುಂಬಳೆಯವರಾದ ಪರಿಣಿತ ರವಿ ಎಡನಾಡು ಅವರ ನಾಲ್ಕನೆಯ ಕೃತಿ "ಯೋಧಗಾಥೆ"ಯನ್ನು ಸೋಮವಾರ ಸಂಜೆ ಝೂಮ್ ಆಪ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

         85 ರ ಹರೆಯದ ನಿವೃತ್ತ ಸೈನಿಕರಾದ ಶಂಕರನಾರಾಯಣ ಹೊಳ್ಳರ ಸೇನೆಯ ಅನುಭವಗಳನ್ನು ಬಹಳ ರೋಚಕವಾಗಿ ಬಿಚ್ಚಿಡುತ್ತಾ ಕೃತಿಯು ನವಿರು ಹಾಗೂ ರೋಮಾಂಚನವನ್ನು ಮೂಡಿಸುತ್ತದೆ. ಅನುಭವ ಹಾಗೂ ಅಗಾಧವಾದ ಮಾನವೀಯ ಕೌಟುಂಬಿಕ ಬದುಕನ್ನು ಕಟ್ಟಿಕೊಡುವ ಈ ಕೃತಿಯು ಸಮಾಜಕ್ಕೆ ಸ್ಪೂರ್ತಿಯಗಿದೆ ಎಂದು ಬಿಡುಗಡೆಗೊಳಿಸಿ ಅವರು ಅಭಿಪ್ರಾಯಪಟ್ಟರು.

       ಪ್ರೇರಣಾದಾಯಕ ಹಾಗೂ ಸಮಾಜಕ್ಕೆ ಮಾರ್ಗದರ್ಶಕವಾಗಿರುವ ಈ ಕೃತಿಯು ಒಂದು ಕಾಲದ ದೇಶದ ಸಾಂಸ್ಕøತಿಕ ಚರಿತ್ರೆಯ ಭಾಗವಾಗಿರುವುದರಿಂದ ಇಂತಹ ಕೃತಿಗಳಿಗೆ ಬಹಳಷ್ಟು ಮಹತ್ವವಿದೆ ಎಂದು ಕೃತಿಯನ್ನು ಪರಿಚಯಿಸಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಧನಂಜಯ ಕಂಬಳೆ ಮಾತನಾಡಿದರು.

       ವೆಬಿನಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕರೂ, ಖ್ಯಾತ ಹಾಸ್ಯ ಲೇಖಕರೂ ಆದ ಶ್ರೀಮತಿ ಭುವನೇಶ್ವರಿ ಹೆಗಡೆ ಮಾತನಾಡಿ ಹೊಳ್ಳರ ಸೈನಿಕ ಬದುಕಿನ ಅವಿಸ್ಮರಣೀಯ ಅನುಭವಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟ ಪ್ರಿಯ ವಿದ್ಯಾರ್ಥಿನಿ ಪರಿಣಿತಳ ಶ್ರಮ ಅಭಿಮಾನ ಮೂಡಿಸುತ್ತದೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ ಅವಳಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗಮನಿಸಿದ್ದೇನೆ ಹಾಗೂ ಅವಳ ಕೃತಿಗಳಲ್ಲೂ ಅದರ ದರ್ಶನವಾಗುತ್ತದೆ. ಪರಿಣಿತ ಕನ್ನಡ ಸಾಹಿತ್ಯ ಲೋಕದಲ್ಲಿ ಭರವಸೆ ಮೂಡಿಸುವ ಲೇಖಕಿಯಾಗಬಲ್ಲಳು ಎಂದು ಹೆಮ್ಮೆಯಿಂದ ಹೇಳುತ್ತೇನೆ. 'ಯೋಧಗಾಥೆ' ಕೃತಿಯು ಹೊಳ್ಳರಂತಹ ಹಿರಿಯರು ನಮ್ಮ ಮನೆಯಲ್ಲೂ ಇರಬೇಕೆಂಬ ಆಕಾಂಕ್ಷೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು. 

        ದೂರದ ವಾಷಿಂಗ್ಟನ್ ನಿಂದ ಭಾಗವಹಿಸಿದ್ದ ಅಂಕಣಕಾರ ಶ್ರೀವತ್ಸ ಜೋಷಿಯವರು ಕತೆಗಳು,  ಕವನಗಳು, ಕಾದಂಬರಿಗಳ ಮಧ್ಯೆ ಈ ರೀತಿ ಒಬ್ಬ ನಿವೃತ್ತ ಸೈನಿಕನ ಯಶೋಗಾಥೆಯನ್ನು ಅಕ್ಷರದಲ್ಲಿ ಮೂಡಿಸಿರುವ ಈ ಕೃತಿ ಖಂಡಿತವಾಗಿಯೂ ಹೆಚ್ಚು ಮೌಲ್ಯಯುತವಾದದ್ದು ಎಂದು ಅಭಿಪ್ರಾಯ ಪಟ್ಟರು. 

     ಕೃತಿಕರ್ತೆ ಪರಿಣಿತ ರವಿ ಸ್ವಾಗತಿಸಿ, ಕಾರ್ತಿಕ್ ಶಾಸ್ತ್ರಿ ವಂದಿಸಿದರು. ವೆಬಿನಾರ್ ಸಮಾರಂಭದ ಮೂಲಕ ವಿಶಿಷ್ಟವಾಗಿ ಮೂಡಿಬಂದ ಕಾರ್ಯಕ್ರಮ 1 ಗಂಟೆ 10 ನಿಮಿಷಗಳಷ್ಟು ಹೊತ್ತು ನೆರವೇರಿದ್ದು ನೂರಾರು ಮಂದಿ ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದು ವಿಶೇಷತೆಯಾಗಿತ್ತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries