ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ನಿಯಂತ್ರಣ ಪ್ರಕ್ರಿಯೆಗಳನ್ನು ಸಮರ್ಥವಾಗಿ ಬಳಸಿ ಯಶಸ್ವಿಯಾದ ಕೇರಳ ರಾಜ್ಯವನ್ನು ಆರ್.ಬಿ.ಐ.(ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ)ಮುಕ್ತಕಂಠದಿಂದ ಶ್ಲಾಘಿಸಿದೆ.
ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಕೋವಿಡ್ ನಿಯಂತ್ರಣ ಚಟುವಟಿಕೆಗಳನ್ನು ನಿಭಾಯಿಸಿದ ಕೇರಳದ ಕ್ರಮ ಅನುಸರಣೀಯವೆಂದು ಆರ್.ಬಿ.ಐ.ಶ್ಲಾಘನೆ ವ್ಯಕ್ತಪಡಿಸಿದೆ.
ಆರ್.ಬಿ.ಐ.ವಾರ್ಷಿಕವಾಗಿ ಪ್ರಕಟಿಸುವ ಲೇಖನದಲ್ಲಿ ಈ ಶ್ಲಾಘನೆ ವ್ಯಕ್ತವಾಗಿದೆ. ಆರ್.ಬಿ.ಐಯ ವಾರ್ಷಿಕ ಸಂಚಿಕೆಯಾದ ಸ್ಟೇಟ್ ಫೈನಾನ್ಸ್, ಎ. ಸ್ಟಡಿ ಓಫ್ ಬಜೆಟ್ಸ್ ಆಫ್ 2020-21 ಪುಸ್ತಕದಲ್ಲಿ ಕೋವಿಡ್ 19 ಬಿ ಕೇರಳ ಮೋಡೆಲ್ ಆಫ್ ಕಂಟೈನ್ಮೆಂಟ್ -ಬಿ ರೋಲ್ ಓಫ್ ಲೋಕಲ್ ಸೆಲ್ಪ್ ಗವರ್ನ್ ಮೇಂಟ್ " ಎಂಬ ಲೇಖನದಲ್ಲಿ ಈ ಶ್ಲಾಘನೆ ವ್ಯಕ್ತಪಡಿಸಲಾಗಿದೆ.
ಈ ಮೂಲಕ ರಾಜ್ಯದ ಕೋವಿಡ್ ನಿಯಂತ್ರಣ ಉಪಕ್ರಮಗಳನ್ನು ಎತ್ತಿಹಿಡಿಯಲು ಸಫಲವಾಗಿದೆ. ಜೊತೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಕೊಡುಗೆಯನ್ನೂ ಇಲ್ಲಿಯ ಲೇಖನದ ಮೂಲಕ ಎತ್ತಿಹಿಡಿಯಲಾಗಿದೆ. ರಾಷ್ಟ್ರದ ಮೊತ್ತಮೊದಲ ಕೋವಿಡ್ ಸೋಂಕಿತ ಕೇರಳದಲ್ಲಿ ಕಂಡುಬಂದಲ್ಲಿಂದ ತೊಡಗಿ ಈವರೆಗಿನ ನಿಯಂತ್ರಣ ಕ್ರಮಗಳು ಮಾದರಿಯಾದುದು ಎಂದು ಲೇಖನ ಬೆಳಕು ಚೆಲ್ಲಿದೆ. ಗಂಭೀರ ಸೋಂಕುಗಳಿರುವ ಪ್ರದೇಶಗಳನ್ನು ಹೋಟ್ ಸ್ಪಾಟ್ ಗಳಾಗಿ ಗುರುತಿಸಿ ನಿರ್ವಹಿಸಿದ ನಿಯಂತ್ರಣ ಕ್ರಮಗಳು ಕೋವಿಡ್ ವಿರುದ್ದ ಗಮನಾರ್ಹವಾಗಿ ಗೆಲುವು ಪಡೆಯಲು ಸಾಧ್ಯವಾಯಿತು. ನಿಖರವಾದ ಯೋಜನಾಬದ್ದ ಕಾರ್ಯಚಟುವಟಿಕೆಗಳು ಕೋವಿಡ್ ಮರಣ ಪ್ರಮಾಣವನ್ನು 0.3 ಶೇ. ಕ್ಕಿಂತ ಮೇಲೇರದಂತೆ ನಿಯಂತ್ರಿಸುವಲ್ಲಿ ದೊಡ್ಡ ಯೋಗದಾನ ನೀಡಿತೆಂದು ಲೇಖನ ಬೊಟ್ಟುಮಾಡಿದೆ.
ಸೋಂಕಿತರನ್ನು ಗುರುತಿಸಲೂ ಚಿಕಿತ್ಸೆ ನೀಡಲೂ ಪಸ್ಟ್ ಲೈನ್ ಚಿಕಿತ್ಸಾ ಕೇಂದ್ರಗಳು, ಸಂಪರ್ಕದ ಮೂಲಕ ಸೋಂಕು ಬಾಧಿತರಾದವರನ್ನು ಗುರುತಿಸಿ ಪರಿಶೀಲನೆಗೊಳಪಡಿಸಿ ನಿರೀಕ್ಷಣಾ ಕೇಂದ್ರಗಳಿಗೆ ತಲಪಿಸಿರುವುದು ಮತ್ತು ಅತ್ಯುಚ್ಚ ಜಾಗೃತಿ ಕಾರ್ಯಕ್ರಮಗಳು ಸೋಂಕು ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿತು. ಇಂತಹ ನಿಯಂತ್ರಣ ಹೋರಾಟಕ್ಕೆ ರಾಜ್ಯ ಸರ್ಕಾರದೊಂದಿಗೆ ಸ್ಥಳೀಯಾಡಳಿತಗಳು ಕೈಜೋಡಿಸಿತ್ತು. ಲಾಕ್ ಡೌನ್ ಸಂದರ್ಭ ಆಹಾರ ಕಿಟ್ ಗಳನ್ನು ಮನೆಮನೆಗಳಿಗೂ ತಲಪಿಸುವಲ್ಲಿ ಸ್ಥಳೀಯಾಡಳಿತಗಳು ಅತ್ಯುತ್ಸಾಹದಲ್ಲಿ ತೊಡಗಿಸಿಕೊಂಡಿದ್ದವು. ಒಗ್ಗಟ್ಟಿನ ಕಾರ್ಯಚಟುವಟಿಕೆ ಇಂತಹ ಸಾಧನೆಗೆ ಕಾರಣವಾಯಿತು ಎಂದು ಲೇಖನ ಪ್ರಶಂಸೆ ವ್ಯಕ್ತಪಡಿಸಿದೆ. ಕುಟುಂಬಶ್ರೀ ಕಾರ್ಯಕರ್ತರ, ಅಂಗನವಾಡಿ ಉದ್ಯೋಗಿಗಳ ನಿರಂತರ ಚಟುವಟಿಕೆಯನ್ನೂ ಲೇಖನ ಪ್ರತ್ಯೇಕವಾಗಿ ಗುರುತಿಸಿ ಮುಕ್ತಕಂಠದಿಂದ ಬೆನ್ನುತಟ್ಟಿದೆ.





