ಪೆರ್ಲ: ಮಣಿಯಂಪಾರೆಯ ಸಂತ ಲಾರೆನ್ಸ್ ಚರ್ಚ್ ಹೊರಗಡೆಯ ಕಾಣಿಕೆ ಡಬ್ಬಿಯನ್ನು ಕಿಡಿಗೇಡಿಗಳು ಧ್ವ0ಸಗೈದ ಘಟನೆ ಭಾನುವಾರ ರಾತ್ರಿ ನಡೆದಿದೆ. ಗಾಜಿನ ಆವರಣವಿರುವ ಕಾಣಿಕೆ ಹುಂಡಿಯ ಒಳಗಿದ್ದ ಸಂತ ಲಾರೆನ್ಸ್ ರ ಪ್ರತಿರೂಪವನ್ನು ಹಾನಿಗೈದ ಸ್ಥಿತಿಯಲ್ಲಿ ಕಂಡು ಬಂದಿದೆ. ಘಟನೆ ಬಗ್ಗೆ ಇಗರ್ಜಿ ಪಧಾಧಿಕಾರಿಗಳು ಬದಿಯಡ್ಕ ಪೋಲೀಸರಿಗೆ ದೂರು ನೀಡಿದ್ದಾರೆ.
ಬಿಜೆಪಿ ಖಂಡನೆ:
ಸೌಹಾರ್ದತೆಗೆ ಪ್ರತೀಕವಾಗಿರುವ ಮಣಿಯಂಪಾರೆ ಸಂತ ಇಗರ್ಜಿಯ ಕಾಣಿಕೆ ಡಬ್ಬಿಯನ್ನು ಹಾಗೂ ಸಂತ ಲಾರೆನ್ಸರ ಪ್ರತಿರೂಪವನ್ನ ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆಯನ್ನು ಭಾರತೀಯ ಜನತಾ ಪಕ್ಷ ಪೆರ್ಲ 193, 194 ನೇ, ಬೂತ್ ಸಮಿತಿ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ಪಿ ಅನಿಲ್ ಕುಮಾರ್ ಮಣಿಯಂಪಾರೆ ತೀವ್ರವಾಗಿ ಖಂಡಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಕೇವಲ ರಾಜಕೀಯ ಲಾಭಕ್ಕೋಸ್ಕರ ದುಷ್ಕರ್ಮಿಗಳು ಸಮಾಜದ ಶಾಂತಿಗೆ ಧಕ್ಕೆ ತರುವ ಹಾಗೂ ಮನಪೂರ್ವಕವಾಗಿ ಕೋಮು ಗಲಭೆಯನ್ನು ಸೃಷ್ಟಿಸಲು ಈ ರೀತಿ ನೀಚ ಕೃತ್ಯವನ್ನ ಕೈಗೊಂಡಿರುತ್ತಾರೆ. ಕೃತ್ಯದ ಹಿಂದಿರುವ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲದೆ ಇದ್ದಲ್ಲಿ ಬದಿಯಡ್ಕ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಘಟನೆಯ ಬಗ್ಗೆ ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಸಭಾ ಕಾಸರಗೋಡು ವಲಯ ಪ್ರತಿನಿಧಿ ನ್ಯಾಯವಾದಿ ಥೋಮಸ್ ಡಿಸೋಜಾ ಅವರೂ ಖಂಡನೆ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಾಸರಗೋಡು ವ್ಯಾಪ್ತಿಯ ಮಂಜೇಶ್ವರ, ವರ್ಕಾಡಿ, ಉಕ್ಕಿನಡ್ಕ ಚರ್ಚುಗಳಲ್ಲಿ ವ್ಯಾಪಕ ಪ್ರಮಾಣದ ಆತಂಕಕಾರಿ ಹಾನಿ ಘಟನೆಗಳು ನಡೆದಿದ್ದು, ಪೋಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಮದು ಅವರು ಆರೋಪಿಸಿದ್ದಾರೆ.






