ನವದೆಹಲಿ: ಮಾನ್ಸೂನ್ ಬರುವವರೆಗೆ ಎಂಜಿಎನ್‌ಆರ್‌ಇಜಿಎ ನಿಧಿಯ ಪ್ರತಿ ಪೈಸೆಯನ್ನೂ ಮಳೆ ನೀರು ಸಂರಕ್ಷಣೆಗಾಗಿ ಖರ್ಚು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಒತ್ತಿ ಹೇಳಿದ್ದಾರೆ.
ವಿಶ್ವ ಜಲ ದಿನವಾದ ಇಂದು ನೀರಿನ ಸಂರಕ್ಷಣೆಗಾಗಿ 'ಜಲ ಶಕ್ತಿ ಅಭಿಯಾನ್: ಕ್ಯಾಚ್ ದಿ ರೇನ್' ಅಭಿಯಾನಕ್ಕೆ ಚಾಲನೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಹೆಚ್ಚಿನ ಮಳೆ ನೀರು ವ್ಯರ್ಥವಾಗುತ್ತಿರುವುದು ಆತಂಕದ ವಿಷಯ ಎಂದರು.
ಮಳೆ ನೀರನ್ನು ಹೆಚ್ಚು ಸಂರಕ್ಷಿಸಿದರೆ, ಅಂತರ್ಜಲವನ್ನು ಅವಲಂಬಿಸುವುದು ಕಡಿಮೆಯಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂಜಿಎನ್‌ಆರ್ ಇಜಿಎ)ಯ ಹಣವನ್ನು ಮಳೆಗಾಲ ಬರುವವರೆಗೆ ಮಳೆ ನೀರು ಸಂರಕ್ಷಣೆಗಾಗಿ ಖರ್ಚು ಮಾಡಬೇಕು ಪ್ರಧಾನಿ ಹೇಳಿದರು.
ಭಾರತದ ಸ್ವಾವಲಂಬನೆ ಅದರ ಜಲ ಸಂಪನ್ಮೂಲ ಮತ್ತು ನೀರಿನ ಸಂಪರ್ಕದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಪರಿಣಾಮಕಾರಿ ನೀರಿನ ಸಂರಕ್ಷಣೆ ಇಲ್ಲದೆ ವೇಗದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
'ಕ್ಯಾಚ್ ದಿ ರೇನ್' ಅಭಿಯಾನ ಇಂದಿನಿಂದ ದೇಶಾದ್ಯಂತ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಇದು ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ.


