ಬೆಂಗಳೂರು: ಐಎಎಸ್, ಐಎಫ್‌ಎಸ್, ಐಪಿಎಸ್ ಮುಂತಾದ ಇತರ ನಾಗರಿಕ ಸೇವೆಗಳ ಮಾದರಿಯಲ್ಲಿ ಭಾರತೀಯ ವೈದ್ಯಕೀಯ ಸೇವೆ(ಐಎಂಎಸ್) ಸಹ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ.
ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ತರುವ ಉದ್ದೇಶದಿಂದ ಸಂಸದೀಯ ಸಮಿತಿಯು ಇತ್ತೀಚೆಗೆ ಭಾರತೀಯ ವೈದ್ಯಕೀಯ ಸೇವೆ ಆರಂಭಿಸುವ ಪ್ರಸ್ತಾಪ ಮಾಡಿದೆ.
ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ರಾಜನ್ ಶರ್ಮಾ ಅವರು 2020ರಲ್ಲಿ ಆರೋಗ್ಯ ವೃತ್ತಿಪರರ ಕೇಡರ್ ಕೋರಿ ನೀತಿ ವರದಿಯನ್ನು ಸಲ್ಲಿಸಿದ್ದು, ಆರೋಗ್ಯ ಸಂಸ್ಥೆಗಳಲ್ಲಿ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಆರೋಗ್ಯ ವೃತ್ತಿಪರರ ಅಗತ್ಯ ಅದರಲ್ಲೂ ಸರ್ಕಾರದ ಮಟ್ಟದಲ್ಲಿ ಅತ್ಯಗತ್ಯ ಎಂದು ಹೇಳಿದ್ದಾರೆ.
"ಆರೋಗ್ಯ ಯೋಜನೆಗಳ ಯಶಸ್ಸನ್ನು ಹೆಚ್ಚಿಸಲು ಮತ್ತು ನೀತಿಯನ್ನು ರೂಪಿಸಲು ಮತ್ತು ರೋಗಗಳ ವಿರುದ್ಧ ಹೋರಾಡುವ ಕ್ರಮವನ್ನು ಹೆಚ್ಚಿಸಲು ಐಎಂಎಸ್ ದಕ್ಷ ಆರೋಗ್ಯ ವ್ಯವಸ್ಥಾಪಕರನ್ನು ಒದಗಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಸೌಲಭ್ಯಗಳ ಅಸಮರ್ಪಕತೆಯ ದೃಷ್ಟಿಯಿಂದ ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವಿನ ಸಮನ್ವಯ ಮತ್ತು ಸಹಯೋಗದ ಕೊರತೆಯನ್ನು ಕೋವಿಡ್-19 ಬಹಿರಂಗಪಡಿಸಿದೆ ಎಂದು ರಾಜನ್ ಶರ್ಮಾ ಅವರು ತಮ್ಮ ನೀತಿ ವರದಿಯಲ್ಲಿ ಹೇಳಿದ್ದಾರೆ.


