ಕಾಸರಗೋಡು: ಕಳೆದ 2 ವರ್ಷಗಳಿಂದ ಜಾರಿಗೊಳಿಸಿದ ಯೋಜನೆಗಳು ಪರಿಣಾಮ ನೀಡುತ್ತಿವೆ. ಕಾಸರಗೋಡು ಜಿಲ್ಲೆಯಲ್ಲಿ ಭೂಗರ್ಭ ಜಲ ಹೆಚ್ಚಳಗೊಂಡಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಸೂಕ್ತ ಯೋಜನೆಗಳೊಂದಿಗೆ ಜಾರಿಗೊಳಿಸಿದ ಯೋಜನೆಗಳು ಕಾಸರಗೊಡು ಜಿಲ್ಲೆಯ ಭೂಗರ್ಭ ಜಲ ಮಟ್ಟವನ್ನು ಹೆಚ್ಚಿಸಿದೆ ಎಂಬುದು ಅಧ್ಯಯನದಿಂದ ಖಚಿತಗೊಂಡಿದೆ. 2 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಭೂರ್ಭ ಜಲ ಮಟ್ಟ ಶೇ 97.8 ವನ್ನೂ ದಾಟಿ ಕಡಿತಗೊಂಡಿದೆ ಎಂದು ವರದಿಯಾಗಿತ್ತು. ತದನಂತರ ಈ ನಿಟ್ಟಿನಲ್ಲಿ ರಚಿಸಿ, ಜಾರಿಗೊಳಿಸಲಾದ ಯೋಜನೆಗಳು ಪರಿಣಾಮ ನೀಡಿವೆ. ಜಲಕೇಂದ್ರಿತ ಅಭಿವೃದ್ಧಿ ಯೋಜನೆಯ ನವೀನ ಮಾದರಿ ಇದಾಗಿದೆ.
ಕಳೆದ 2 ವರ್ಷಗಳಿಂದ ಭೂಗರ್ಭ ಜಲದ ಶೋಷಣೆ ಕಡಿಮೆಯಾಗಿರುವುದು ವೈಜ್ಞಾನಿಕ ಅಧ್ಯಯನಗಳಿಂದ ಖಚಿತಗೊಂಡಿದೆ. ಜಿಲ್ಲೆಯ 6 ಬ್ಲೋಕ್ ಗಳ ವಿವಿಧ ಪ್ರದೇಶಗಳ ಆಯ್ದ 67 ಬಾವಿಗಳ ನಿಗಾದೊಂದಿಗೆ ಈ ವರದಿ ಸಿದ್ಧಗೊಳ್ಳುತ್ತಿದೆ. ಪ್ರತ್ಯೇಕ ನಂಬ್ರಗಳನ್ನು ಈ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಿಗೆ ನೀಡಿ ನಿಗಾ ನಡೆಸಲಾಗುತ್ತಿವೆ.
ಮಂಜೇಶ್ವರ ಬ್ಲೋಕ್ ನಲ್ಲಿ 14( 8 ಬಾವಿಗಳು, 6 ಕೊಳವೆ ಬಾವಿಗಳು), ಕಾಸರಗೋಡು ಬ್ಲೋಕ್ ನಲ್ಲಿ 9 ( 7 ಬಾವಿಗಳು, 2 ಕೊಳವೆ ಬಾವಿಗಳು), ಕಾಞಂಗಾಡು ಬ್ಲೋಕ್ ನಲ್ಲಿ 7( 5 ಬಾವಿಗಳು, 2 ಕೊಳವೆ ಬಾವಿಗಳು), ನೀಲೇಶ್ವರ ಬ್ಲೋಕ್ ನಲ್ಲಿ 8( 5 ಬಾವಿಗಳು, 3 ಕೊಳವೆ ಬಾವಿಗಳು), ಪರಪ್ಪ ಬ್ಲೋಕ್ ನಲ್ಲಿ 16(12 ಬಾವಿಗಳು, 4 ಕೊಳವೆ ಬಾವಿಗಳು) ಬಾವಿಗಳನ್ನು ಪ್ರತಿತಿಂಗಳು ನಿಗಾ ವಹಿಸಲಾಗುತ್ತಿದೆ. 2019 ಮೇ ತಿಂಗಳಿಂದ 2021 ಮೇ ತಿಂಗಳ ವರೆಗೆ ಭೂಗರ್ಭ ಜಲ ಇಲಾಖೆ ನಡೆಸಿರುವ ನಿಗಾದಲ್ಲಿ 9 ಮೀಟರ್ ವರೆಗೆ ಜಲಾಂಶ ಹೆಚ್ಚಿರುವುದು ಪತ್ತೆಯಾಗಿದೆ.
ನೀರಿನ ಕೊರತೆ ತೀವ್ರವಾಗಿರುವ ಮಂಜೇಶ್ವರ ಬ್ಲೋಕ್ ನಲ್ಲಿ ಬಾವಿಗಳನ್ನು ಗರಿಷ್ಠ ಮಟ್ಟದಲ್ಲಿ 9 ಮೀಟರ್ ವರೆಗೆ, ಕೊಳವೆ ಬಾವಿಗಳಲ್ಲಿ 6 ಮೀಟರ್ ವರೆಗೆ ಜಲಾಂಶ ಹೆಚ್ಚಳಗೊಂಡಿದೆ. ಕಾಸರಗೊಡಿನಲ್ಲಿ 7, ಕಾಞಂಗಾಡಿನಲ್ಲಿ 5 ಮೀಟರ್, ನೀಲೇಶ್ವರದಲ್ಲಿ 6.5, ಪರಪ್ಪದಲ್ಲಿ 4 ಮೀಟರ್ ವರೆಗೆ ಜಲಮಟ್ಟ ಹೆಚ್ಚಿದೆ. ಕೊಳವೆಬಾವಿಗಳಲ್ಲೂ ಇದಕ್ಕೆ ಅನುಗುಣವಾಗಿಯೇ ಜಲಾಂಶ ಹೆಚ್ಚಾಗಿದೆ. ಜಲಸಂರಕ್ಷಣೆಗೆ ಮಹತ್ವ ನೀಡಿ ವಿವಿಧ ಇಲಾಖೆಗಳ ಏಕೀಕರಣದೊಂದಿಗೆ ನಡೆಸಲಾದ ವಿವಿಧ ಚಟುವಟಿಕೆಗಳ ಪರಿಣಾಮ ಈ ಸಾಧನೆ ನಡೆದಿದೆ.
ಭೂರ್ಘ ಜಲದ ಅನಿಯಂತ್ರಿತ ಬಳಕೆ ಮಜಮಟ್ಟ ಗಣನೆಗೂ ಮೀರಿ ಕಡಿತಕ್ಕೆ ಪ್ರಧಾನ ಕಾರಣವಾಗುತ್ತಿದೆ ಎಂದು ಕಲೆದ 2 ವರ್ಷಗಳ ಹಿಂದೆ ಕಾಸರಗೊಡು ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಜಲಶಕ್ತಿ ಮಿಷನ್ ಪ್ರತಿನಿಧಿಗಳ ತಂಡದ ಅಧ್ಯಯನ ವರದಿ ತಿಳಿಸಿತ್ತು. ರಾಜ್ಯದಲ್ಲಿ ಉಳಿದೆಡೆಗೆ ಹೋಲಿಸಿದರೆ ಮಳೆ ಸಧಿಕ ಪ್ರಮಾಣದಲ್ಲಿ ಲಭಿಸುವ ಪ್ರದೇಶವಾಗಿದ್ದರೂ, ಪ್ರಾಕೃತಿಕವಾಗಿ ಇಳಿಸ್ತರ ಜಾಗಗಳಿರುವ ಕಾರಣ ನೀರು ಇಂಗುವುದಿಲ್ಲ. ಜೊತೆಗೆ ಕೆಂಗಲ್ಲು ಪ್ರದೇಶವಾಗಿರುವದರಿಂದ ಮಳೆನೀರು ಇಂಗದಿರುಲು ಇನ್ನೊಂದು ಕಾರಣವಾಗಿದೆ. ವಾತಾವರಣದಲ್ಲಿ ಸಂಭವಿಸಿದ ಏರುಪೇರು ಮತ್ತು ಉಷ್ಣಾಂಶ ಹೆಚ್ಚಿದ ಪರಿಣಾಮ ಜಲಮಟ್ಟದ ಇಳಿಕೆಯಾಗಿದೆ. ಪಳ್ಳ ಇತ್ಯಾದಿ ಜಲಶಯಗಳನ್ನು ಮಣ್ಣು ತುಂಬಿ ಮುಚ್ಚಿದುದು, ಗುಡ್ಡಗಳನ್ನು ನೆಲಸಮ ಮಾಡಿರುವುದು ಇತ್ಯಾದಿ ಜಲಮಟ್ಟ ಕುಸಿಯುವಂತೆ ಮಾಡಲು ಕಾರಣವಾದುವು. ಜಲಶೋಷಣೆ ಶೇ 90 ಕ್ಕೂ ನಡೆದಿರುವ ಪ್ರದೇಶಗಳನ್ನು ಕ್ರಿಟಿಕಲ್ ವಲಯವೆಂದು ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 6 ಬ್ಲೋಕ್ ಗಳಲ್ಲಿ 2 ಸೆಮಿ ಕ್ರಿಟಿಕಲ್ ಮತ್ತು ಒಂದು ಕ್ರಿಟಿಕಲ್ ಬ್ಲೋಕ್ ಗಳಾಗಿವೆ.
ಜಲಸಂರಕ್ಷಣೆ ಗುರಿಯಾಗಿಸಿ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೊಳಿಸಿರುವ ಯೋಜನೆಗಳಲ್ಲಿ ಪ್ರತಿಯೊಂದೂ ಯಶಸ್ಸುಗೊಂಡಿರುವ ಸೂಚನೆ ಎಂಬಂತೆ ಭೂಗರ್ಭ ಜಲಮಟ್ಟ ಹೆಚ್ಚಳಗೊಂಡಿದೆ. ಮಳೆನೀರು ಸೋರಿಹೋಗದಂತೆ ಕೃತಕ ಜಲಸಂಗ್ರಹ ಪ್ರಕ್ರಿಯೆ ಈ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸಿದೆ. ಭೂಗರ್ಭ ಜಲ ಇಲಾಖೆ, ಮಣ್ಣು ಸಂರಕ್ಷಣೆ ಇಲಾಖೆ, ನೀರಾವರಿ, ಸ್ಥಳೀಯಾಡಳಿತೆ, ನೌಕರಿ ಖಾತರಿ ಯೋಜನೆ, ಶುಚಿತ್ವ ಮಿಷನ್ ಇತ್ಯಾದಿ ವಿಭಾಗಗಳೊಂದಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತುಕತೆ ನಡೆಸಿ ಯೋಜನೆಗಳನ್ನು ಸಿದ್ಧಗೊಳಿಸಿದ್ದರು.
ಈ ಹಿಂದೆಯೇ ಜಾರಿಯಲ್ಲಿದ್ದ ಮಳೆನೀರು ಇಂಗುಗುಂಡಿ ಯೋಜನೆಗಳನ್ನು ವಿಸ್ತೃತಗೊಳಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಜಿಲ್ಲೆಯಲ್ಲಿ 52770 ಎಕ್ರೆಗೂ ಅಧಿಕ ಜಾಗ ಕೆಂಗಲ್ಲು ಪ್ರದೇಶವಾಗಿದೆ. ಇಲ್ಲಿ ನೀರು ಭೂಮಿಗೆ ಇಂಗಿದೇ ಇರುವುದು ಜಲಸಂರಕ್ಷಣೆ ಚಟುವಟಿಕೆಗಳಿಗೆ ಬಲುದೊಡ್ಡ ಹೊಡೆತವಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಮಳೆನೀರು ಸಂಗ್ರಹ, ತಡೆಗೋಡೆ, ಕೆರೆಗಳ ಪುನಶ್ಚೇತನ, ಪರಂಪರಾಗತ ಜಲಾಶಯಗಳ ಪುನರುದ್ಧಾರ, ವಾಟರ್ ಶೆಡ್ ಯೋಜನೆ ಇತ್ಯಾದಿ ಯೋಜನೆಗಳನ್ನು ರಚಿಸಿ ಜಾರಿಗೊಳಿಸಲಾಗಿದೆ. ಬಾವಿಗಳ ರೀಚಾಜಿರ್ಂಗ್, ಮಳೆನೀರು ಕೊಯ್ಲು ಇತ್ಯಾದಿಗಳೂ ಇದಕ್ಕೆ ಪೂರಕವಾಗಿ ಅನುಷ್ಟಾನಗೊಂಡುವು.
ಮಣ್ಣಿನ ಜೈವಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ತಿನಿಸು ಹುಲ್ಲು ಕೃಷಿ, ಜನಪರ ಸಹಭಾಗಿತ್ವದೊಂದಿಗೆ ಕಿರು ತಡೆಗೋಡೆಗಳ ನಿರ್ಮಾಣ, ಪಳ್ಳಗಳ ಪುನಶ್ಚೇತನ, ರೆಗ್ಯುಲೇಟರ್ ಬ್ರಿಜ್ ಗಳು ಇತ್ಯಾದಿಗಳನ್ನು ಜಲಸಂರಕ್ಷಣೆಯ ಉದ್ದೇಶಗಳೊಂದಿಗೆ ಜಾರಿಗೊಳಿಸಲಾಗಿದೆ. ನೀರಿನ ಹರಿಯುವಿಕೆಯ ನಿಗಾದೊಂದಿಗೆ ರಿಂಗ್ ಚೆಕ್ ಡಾಂ ಇತ್ಯಾದಿಗಳೂ ನಿರ್ಮಾಣಗೊಂಡುವು.
ಬಿದಿರು ಸಸಿ ನೆಡುವಿಕೆ ಈ ನಿಟ್ಟಿನಲ್ಲಿ ಗಮನಾರ್ಹ ಯೋಜನೆಯಾಗಿದೆ. ಇಲ್ಲಿನ ಭೂಪ್ರಕೃತಿ ಮತ್ತು ಮಣ್ಣಿನ ಸ್ವಭಾವ ಅಭ್ಯಸಿಸಿ ಬಿದಿರು ಸಸಿ ನೆಡಲು ತೀರ್ಮಾನಿಸಲಾಗಿತ್ತು. ಜಿಲ್ಲೆಯಾದ್ಯಂತ ಈ ಯೋಜನೆ ವಿಸ್ತೃತಗೊಂಡ ಹಿನ್ನೆಲೆಯಲ್ಲಿ ಬಿದಿರು ಕೃಷಿಯ ದಕ್ಷಿಣ ಭಾರತ ಮಟ್ಟದ ರಾಜಧಾನಿಯಾಗಿ ಕಾಸರಗೋಡು ಜಿಲ್ಲೆ ಮನ್ನಣೆ ಪಡೆಯಿತು. ಕೊಳವೆಬಾವಿ ನಿರ್ಮಾಣ ನಿಯಂತ್ರಣ ಜಾರಿಗೆ ತಂದುದೂ ಜಲಮಟ್ಟ ಹೆಚ್ಚಿಸುವಲ್ಲಿ ತನ್ನದೇ ಕೊಡುಗೆ ನೀಡಿದೆ.

