ಕಾಸರಗೋಡು : ಕೇರಳ ರಾಜ್ಯದ ಕರಾವಳಿಯಲ್ಲಿ ಜೂ.9 ಅರ್ಧರಾತ್ರಿ 12 ಗಂಟೆಯಿಂದ ಜು.31 ಅರ್ಧರಾತ್ರಿ ವರೆಗಿನ 52 ದಿನಗಳ ಕಾಲ ಟ್ರಾಲಿಂಗ್ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಯಾಂತ್ರಿಕ ಬೂಟುಗಳು ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಕೂಡದು ಎಂದು ಕಾಸರಗೋಡು ಜಿಲ್ಲಾ ಮೀನುಗಾರಿಕೆ ಸಹಾಯಕ ನಿರ್ದೇಶಕ ತಿಳಿಸಿದರು. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಕೆ.ಎಂ.ಎಫ್.ಆರ್. ಕಾಯಿದೆ ಪರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದರು.
ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ನಿಯಂತ್ರಣ ಕೊಠಡಿಯನ್ನು ದೂರವಾಣಿ ಸಂಖ್ಯೆ : 04672202537 ಮತ್ತು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ದೂರವಾಣಿ ಸಂಖ್ಯೆ: 9496007034 ಮೂಲಕ ಸಂಪರ್ಕಿಸಬಹುದು.
ಪ್ರಧಾನ ಕಟ್ಟುನಿಟ್ಟುಗಳು :
ಕೇರಳ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಇತರ ರಾಜ್ಯಗಳ ಬೋಟುಗಳು ಜೂ.9ರ ಮುಂಚಿತವಾಗಿ ಈ ಕರಾವಳಿ ಬಿಟ್ಟು ತೆರಳಬೇಕು. ಎರಡು ದೋಣಿಗಳನ್ನು ಬಳಸಿ ನಡೆಸುವ ಪೇರ್ ಟ್ರಾಲಿಂಗ್ ಯಾ ಡಬ್ಬಲ್ ನೆಟ್, ಕೃತಕ ಬೆಳಕು ಬಳಸಿ ನಡೆಸುವ ಮೀನುಗಾರಿಕೆ, ಜುವೆನೆಲ್ ಮೀನುಗಾರಿಕೆ ಇತ್ಯಾದಿಗಳನ್ನೂ ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದು ಮೀನುಗಾರಿಕೆಯಲ್ಲೂ ಕಡ್ಡಾಯವಾಗಿದೆ. ಈ ಕಾರಣದಿಂದ ಇನ್ ಬೋರ್ಡ್ ದೋಣಿಗಳಲ್ಲಿ 30 ಮಂದಿ, ಕೆರಿಯರ್ ದೋಣಿಗಳಲ್ಲಿ 5 ಮಂದಿ ಮಾತ್ರ ಮೀನುಗಾರಿಕೆ ನಡೆಸಬಹುದಾಗಿದೆ.
ಟ್ರಾಲಿಂಗ್ ನಿಷೇಧ ಆರಂಭಗೊಳ್ಳುವ ಜೂ.9ರಂದು ಅರ್ಧರಾತ್ರಿ 12 ಗಂಟೆಗೆ ಮುಂಚಿತವಾಗಿ ಎಲ್ಲ ಯಾಂತ್ರಿಕ ಬೋಟುಗಳು ಹಾರ್ಬರ್ ಗಳಿಗೆ ಪ್ರವೇಶಿಸಬೇಕು. ನಿಷೇಧ ಕೊನೆಗೊಳ್ಳುವ ಜು.31ರಂದು ಅರ್ಧರಾತ್ರಿ 12 ಗಂಟೆ ನಂತರ ಮಾತ್ರ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಬಹುದಾಗಿದೆ. ಸಮಯ ಕ್ರಮ (ವೇಳೆ ಪಟ್ಟಿ)ವನ್ನು ಯಥಾವತ್ತಾಗಿ ಪಾಲಿಸದೇ ಇರುವ ಬೋಟುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮನ್ಸೂನ್ ಅವಧಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗುವ ಎಲ್ಲ ದೋಣಿಗಳಲ್ಲಿ ಅಗತ್ಯದ ಸುರಕ್ಷಾ ಉಪಕರಣಗಳು, ಮೀನುಗಾರರ ಬಳಿ ಬಯೋಮೆಟ್ರಿಕ್ ಕಾರ್ಡ್ ಇತ್ಯಾದಿ ಕಡ್ಡಾಯವಾಗಿ ಇರಬೇಕು. ಮುನ್ಸೂಚನೆ ನೀಡಿದ ನಂತರವಷ್ಟೇ ಮೀನುಗಾರಿಕೆಗೆ ತೆರಳಬೇಕು.
ಸಮುದ್ರದಲ್ಲಿ ನಡೆಯಬಹುದಾದ ಎಲ್ಲ ಅಪಾಯಗಳನ್ನು ಕಾಞಂಗಾಡು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಬೇಕು. ಹರಾಜು ಮೂಲಕ ಮಾತ್ರ ಮೀನು ಮಾರಾಟಕ್ಕೆ ಅನುಮತಿ ಇರುವುದು.



