ಉಪ್ಪಳ: ಬಡ ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಪ್ರೊ. ಎಂ ರಾಮ ಅವರು ದೇಣಿಗೆಯಾಗಿ ನೀಡಿದ ಸಹಾಯ ಕಲಿಕೋಪಕರಣಗಳ ವಿತರಣೆ ಪೈವಳಿಕೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕಲಿಕೋಪಕರಣಗಳನ್ನ ಕುರುಡಪದವು ಶಾಲಾ ಅಧಿಕೃತರಿಗೆ ವಿತರಿಸಿದರು. ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುರುಡಪದವು ಮೈರುಗದಲ್ಲಿ ಚಂದ ಪಾಟಾಳಿ - ದೂಮಾಳು ದಂಪತಿಗಳ ಪುತ್ರನಾಗಿ ಜನಿಸಿದ ರಾಮ ಅವರು ಹೆಚ್ಚಿನ ಶಿಕ್ಷಣವನ್ನು ಖಾಸಗಿಯಾಗಿಯೇ ನಡೆಸಿದರು. ಶಾಲಾ ಶಿಕ್ಷಕ ಕಾಲೇಜು ಪ್ರಾಧ್ಯಾಪಕರಾಗಿದ್ದ ರಾಮ ಅವರು ಅಪ್ರತಿಮ ಸಾಧಕರಾಗಿದ್ದರು. ರಾಜ್ಯ ರಾಜಧಾನಿಯಲ್ಲಿದ್ದುಕೊಂಡು ಕನ್ನಡ ಪರ ಕೆಲಸಗಳನ್ನು ಮಾಡಿಕೊಂಡಿದ್ದ ಅವರು ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರಿಗೆ ವಿಶ್ವವಿದ್ಯಾಲಯಗಳ ಹಲವಾರು ಶೈಕ್ಷಣಿಕ ಸವಲತ್ತುಗಳನ್ನು, ಹುದ್ದೆಗಳನ್ನು ದೊರಕಿಸಿಕೊಡುವಲ್ಲಿ ಅವಿರತ ಶ್ರಮಿಸಿದರು.
ಪೈವಳಿಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ, ಪೈವಳಿಕೆ ಗ್ರಾಮ ಪಂಚಾಯತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಝೆಡ್.ಎ ಕಯ್ಯಾರ್, ಪೈವಳಿಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರ್, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಎನ್ ನಂದಿಕೇಶನ್, ಮಂಜೇಶ್ವರ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ದಿನೇಶ್ ವಿ, ಮಂಜೇಶ್ವರ ಬಿ ಆರ್ ಸಿ ಸಂಯೋಜಕ ಆದಶ್ ಬಿಪಿ, ಕುರುಡಪದವು ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ, ಕುರುಡಪದವು ಶಾಲಾ ಶಿಕ್ಷಕಿ ಕಮಲಾಕ್ಷಿ ಎಸ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಸರ್ವ ಶಿಕ್ಷ ಕೇರಳದ ಜಿಲ್ಲಾ ಸಂಚಾಲಕ ನಾರಾಯಣ ದೇಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೈವಳಿಕೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜೋಯಿ ಥೋಮಸ್ ಸ್ವಾಗತಿಸಿ ಪೈವಳಿಕೆ ಪಿ ಇ ಸಿ ಕಾರ್ಯದರ್ಶಿ ಅಬ್ದುಲ್ ಕರೀಂ ಪಿಕೆ ವಂದಿಸಿದರು.




