ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣ ಸಂಬಂಧ ಭೂಸ್ವಾಧೀನ ನಡೆಸಿರುವ ಹಿನ್ನೆಲೆಯಲ್ಲಿ ನಷ್ಟಪರಿಹಾರ ವಿತರಣೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕಿರಿ ಅವರು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ ತಿಳಿಸಿದರು.
ಭೂ ಸ್ವಾಧೀನಕ್ಕಾಗಿ ನೇಮಿಸಿರುವ ಪ್ರಾಧಿಕಾರ(ಸಿ.ಎ.ಎ.ಎಲ್.ಎ.) ಕಾಸರಗೋಡು, ಅಡ್ಕತ್ತಬೈಲು, ಕಾಞಂಗಾಡು ಎಂಬ ಮೂರು ಗ್ರಾಮಗಳಲ್ಲಿ ಅವಾರ್ಡ್ ನಡೆಸಿದ ನಷ್ಟಪರಿಹಾರ ಮೊಬಲಗು ಹೆಚ್ಚಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರ್ಬಿಟ್ರೇಟರ್ ಅವರನ್ನು ಸಂಪರ್ಕಿಸಲಾಗುವುದು. ಆರ್ಬಿಟ್ರೇಟರ್ ಅವರ ಆದೇಶ ಲಭಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಉಳಿದ ಗ್ರಾಮಗಳಲ್ಲಿ ನಷ್ಟಪರಿಹಾರ ವಿತರಣೆ ಪ್ರಗತಿಯಲ್ಲಿದೆ ಎಂದವರು ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಭೂಸ್ವಾಧೀನ ಸಂಬಂಧ ನೇಮಿಸಿರುವ ಪ್ರಾಧಿಕಾರದ( ಸಿ.ಎ.ಎ.ಎಲ್.ಎ.) ಅಕೌಂಟ್ ನಲ್ಲಿ ರಾಷ್ಟ್ರೀಯ ಹೆದಾರಿ ನಷ್ಟಪರಿಹಾರ ಮೊಬಲಗು ಆಗಿರುವ 696.89 ಕೋಟಿ ರೂ.ನಲ್ಲಿ 624.96 ಕೋಟಿ ರೂ. ನಿಕ್ಷೇಪಗೊಳಿಸಿರುವುದಾಗಿ ಕೇಂದ್ರ ಸಚಿವ ತಿಳಿಸಿದರು. ಇದರಲ್ಲಿ 430.96 ಕೋಟಿ ರೂ. ಭೂ ಸ್ವಾಧೀನಕ್ಕಾಗಿ ನೇಮಿಸಿರುವ ಪ್ರಾಧಿಕಾರ ಈಗಾಗಲೇ ವಿತರಣೆ ನಡೆಸಿದೆ.
ಸಾರ್ವಜನಿಕ ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಇತ್ಯಾದಿಗಳಿಂದ ಭೂ ಸ್ವಾಧೀನ ನಡೆಸಿರುವ ನಿಟ್ಟಿನಲ್ಲಿ ನಷ್ಟಪರಿಹಾರ ರಾಷ್ಟ್ರೀಯ ಹೆದ್ದಾರಿ ಕಾಯಿದೆ-1956 ಪ್ರಕಾರ ಯಥಾ ವೇಳೆ ನೀಡಲಾಗುವುದು ಎಂದು ಕೇಂದ್ರ ಸಚಿವ ಹೇಳಿದರು.
ಪೆರ್ವಾಡು-ಚಟ್ಟಂಚಾಲ್ ರಸ್ತೆಯ ಭಾಗ(ಕಿ.ಮೀ.41-ಕಿ.ಮೀ.63) ಇತ್ತೀಚಗೆ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿ ವಹಿಸಿಕೊಂಡು, ಇದನ್ನು ಸಂಚಾರ ಯೋಗ್ಯವಾಗಿಸಲಾಗುವುದು ಎಂದು ಅವರು ನುಡಿದರು.
ಹೊಸದುರ್ಗ-ಮಡಿಕೇರಿ ರಸ್ತೆ, ಚೆರ್ಕಳ-ಕಲ್ಲಡ್ಕ ರಸ್ತೆಗಳನ್ನು ರಾಷ್ಟ್ರೀಯ ಹೆದಾರಿಯಾಗಿ ಘೋಷಿಸಬೇಕು ಎಂಬ ಶಿಫಾರಸು ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸಚಿವ ಸಂಸದರಿಗೆ ತಿಳಿಸಿದರು. ನೂತನ ರಾಷ್ಟ್ರೀಯ ಹೆದ್ದಾರಿ ಘೋಷಣೆಯ ಮಾರ್ಗಸೂಚಿ/ನಿಬಂಧನೆ ಅಂತಿಮರೂಪ ಪಡೆದಲ್ಲಿ ಈ ಸಂಬಂಧ ಕ್ರಮ ಜಾರಿಗೊಳ್ಳಲಿದೆ.
ಕಣ್ಣೂರು ಜಿಲ್ಲೆಯ ಕಲ್ಯಾಶೇರಿ, ಪಯ್ಯನ್ನೂರು ಗ್ರಾಮಗಳಲ್ಲಿ ಜಾಗದ ಫೇರ್ ವಾಲ್ಯೂ ಸಂಬಂಧ ಭೂಸ್ವಾಧೀನಕ್ಕಾಗಿ ನೇಮಿಸಿರುವ ಪ್ರಾಧಿಕಾರ(ಸಿ.ಎ.ಎ.ಎಲ್.ಎ)ದ ಅಂದಾಜು ಮೌಲ್ಯ ಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.






