HEALTH TIPS

ಬಾಡದ ಭಾವಪುಷ್ಪಗಳನ್ನು ಭಕ್ತಿಯ ಮೂಲಕ ಸಮರ್ಪಿಸಿದಾಗ ಬದುಕಿಗೆ ಕೃತಾರ್ಥತೆ: ಸುಬ್ರಹ್ಮಣ್ಯ ಮಠಾಧೀಶ: ಎಡನೀರಲ್ಲಿ ಚಾತುರ್ಮಾಸ್ಯ ಸಮಾರಂಭ ಉದ್ಘಾಟಿಸಿ ಅಭಿಮತ

          ಕಾಸರಗೋಡು: ಮನುಷ್ಯ ಜೀವನದ ಮಹತ್ವಿಕೆಯನ್ನು ಕಾಪಿಡಲು ನಂಬಿಕೆ ಎಂದಿಗೂ ಮುಖ್ಯವಾಗಿರುತ್ತದೆ. ಇಂತಹ  ನಂಬಿಕೆಗಳಿಗೆ ಬಲತುಂಬುವ ಶಕ್ತಿ ಆಧ್ಯಾತ್ಮಿಕತೆಯದ್ದಾಗಿದೆ. ನಮಗಿಂತ ಮೀರಿದ ಶಕ್ತಿಗೆ ಶರಣಾಗಿ ಬದುಕುವುದು ಜೀವನಕ್ಕೆ ಸ್ಥೈರ್ಯ, ನೆಮ್ಮದಿ ನೀಡುತ್ತದೆ. ಈ ಬಗೆಗಿನ ಜಾಗೃತಿ ಮಠ-ಮಂದಿರಗಳ ಮೂಲಕ ಬೆಳೆದುಬಂದಿದೆ ಎಂದು ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.

             ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಸಂಜೆ ಶ್ರೀಂಠದ ಆವರಣದಲ್ಲಿ ನಡೆದ ಧಾರ್ಮಿಕ, ಸಾಂಸ್ಕøತಿಕ ಸಮಾರಂಭದ ಉದ್ಘಾಟನೆಯನ್ನು ಜ್ಯೋತಿ ಬೆಳಗುವ ಮೂಲಕ ನಿರ್ವಹಿಸಿ ಅವರು ಆಶೀರ್ವಚನ ನೀಡಿದರು.

        ಭಗವಂತನಿಗೆ ಎಂದಿಗೂ ಬಾಡದ ಭಾವಪುಷ್ಪಗಳನ್ನು ಭಕ್ತಿಯ ಮೂಲಕ ಸಮರ್ಪಿಸಿದಾಗ ಬದುಕು ಕೃತಾರ್ಥಗೊಳ್ಳುತ್ತದೆ. ಅನುಷ್ಠಾನಗಳ ಮೂಲಕ ಯತಿಗಳು ಸಮಾಜ, ಧರ್ಮ, ದೇಶಗಳ ಸಂಕೀರ್ಣತೆ, ಸವಾಲುಗಳಿಗೆ ಎದುರಾಗಿ ಆಧ್ಯಾತ್ಮಿಕ ಶಕ್ತಿ ಸಂಚಯನದ ಮೂಲಕ ಬಲ ತುಂಬುತ್ತಾರೆ. ಅನುಷ್ಠಾನ ಮತ್ತು ಅಹಿಂಸೆಗಳೇ ಚಾತುರ್ಮಾಸ್ಯದ ಅಂತಿಮ ಲಕ್ಷ್ಯ ಎಂದು ಅವರು ತಿಳಿಸಿದರು.


          ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಯುಗದಲ್ಲಿ ಭಗವಂತನಲ್ಲಿ ಹೃದಯಪೂರ್ವಕವಾಗಿ ಇರಿಸುವ ಭಕ್ತಿಯಿಂದಷ್ಟೇ ನೆಮ್ಮದಿ ಲಭಿಸುವುದೆಂದು ಆರ್ಷವಾಣಿಯಾಗಿದ್ದು, ಭಗವಾನ್ ಶಂಕರ ಭಗವತ್ಪಾದರ ಮೂಲಕ ರಾಷ್ಟ್ರದಲ್ಲಿ ಸನಾತನತೆ ಶಕ್ತಿಪಡೆಯಿತು. ಆ ಪರಂಪರೆಯ ಎಡನೀರು ಮಠದ ಕೊಡುಗೆಗಳು ಅಪಾರವಾದುದಾಗಿದ್ದು, ಭಾರತದಲ್ಲಿ ಸಂವಿಧಾನ ವ್ಯವಸ್ಥೆ ನೆಲೆಗೊಂಡಿರುವಲ್ಲಿವರೆಗೂ ಎಡನೀರಿನ ಕೊಡುಗೆ-ಕೀರ್ತಿಗಳು  ಮಹತ್ವದ್ದು ಎಂದು ತಿಳಿಸಿದರು.

            ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಉಪಸ್ಥಿತರಿದ್ದು ಮಾತನಾಡಿದರು. ಚಾತುರ್ಮಾಸ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಶ ತಂತ್ರಿ ಕುಂಟಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಎಡನೀರು ಸ್ವಾಗತಿಸಿ, ಸೂರ್ಯ ಭಟ್ ಎಡನೀರು ವಂದಿಸಿದರು. ಕೆಯ್ಯೂರು ನಾರಾಯಣ ಭಟ್ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries