ಕಾಸರಗೋಡು: ರಾಜ್ಯ ಸರ್ಕಾರ ಪರಿಶಿಷ್ಟ ವರ್ಗ(ಎಸ್.ಟಿ)ವಿಭಾಗದ ಜನತೆಯೊಂದಿಗೆ ನಡೆದುಕೊಳ್ಳುತ್ತಿರುವ ನಿರ್ಲಕಷ್ಯ ಧೋರಣೆ ಕೈಬಿಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ತಿಳಿಸಿದ್ದಾರೆ. ಅವರು ಎಸ್‍ಟಿ ವಿಭಾಗದ ವಿರುದ್ಧ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಎಸ್‍ಟಿ ಮೋರ್ಚಾ ಮಂಡಲ ಸಮಿತಿ ಬುಧವಾರ ಪೆರ್ಲ ಎಸ್‍ಟಿ ಎಕ್ಸ್‍ಟೆನ್ಶನ್ ಕಚೇರಿ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ಎಸ್‍ಟಿ ವಿಭಾಗದ ಅಭಿವೃದ್ಧಿಗಾಗಿ ಮೀಸಲಿರಿಸಿದ ಮೊತ್ತವನ್ನು ಕಳೆದ ಮೂರು ವರ್ಷಗಳಿಂದ ವಿನಿಯೋಗಿಸಿಲ್ಲ. ಎಸ್‍ಟಿ ವಿಭಾಗಕ್ಕೆ ಜನನಿ ಜನ್ಮ ಭೂಮಿ ಯೋಜನೆಯನ್ವಯ ಸವಲತ್ತು ಹಾಗೂ ಓಣಂ ಕಿಟ್ ಕೂಡಾ ವಿತರಣೆಯಾಗಿಲ್ಲ. ಮರಾಟಿ ಸಮುದಾಯವನ್ನು ಎಸ್‍ಟಿ ವಿಭಾಗಕ್ಕೆ ಒಳಪಡಿಸಿದ್ದರೂ, ಈ ಸಮುದಾಯಕ್ಕೆ ಅರ್ಹ ಸವಲತ್ತು ಒದಗಿಸದೆ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿರುವುದಾಗಿ ಆರೋಪಿಸಿದರು.
ಎಸ್‍ಟಿ ಮೋರ್ಚಾ ಮುಖಂಡ, ಜಿಪಂ ಸದಸ್ಯ ನಾರಾಯಣ ನಾಯ್ಕ್ ಅಡ್ಕಸ್ಥಳ ಅಧ್ಯಕ್ಷತೆ ವಹಿಸಿದ್ದರು. ಎಸ್‍ಸಿ-ಎಸ್‍ಟಿ ಮೋರ್ಚಾ ರಾಜ್ಯ ಸಮಿತಿ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್.ಭಟ್, ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಇಂದಿರಾ, ಆಶಾಲತಾ, ಲಲಿತಾ ಕೇಶವ್ ಖಂಡಿಗೆ ಉಪಸ್ಥಿತರಿದ್ದರು. ಎಸ್‍ಟಿ ಮೋರ್ಚಾ ಮಂಡಲ ಸಮಿತಿ ಕಾರ್ಯದರ್ಶಿ ನಾರಾಯಣ ಸ್ವಾಗತಿಸಿದರು. ಎಸ್‍ಟಿ ಮೋರ್ಚಾ ಮುಖಂಡ ಶಶಿ ವಂದಿಸಿದರು.


