ನವದೆಹಲಿ: ಕೇರಳದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದ ಕೊರೊನಾ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಆಗಸ್ಟ್ 16ರಂದು ಭೇಟಿ ನೀಡಲಿದ್ದಾರೆ.
ಸಿಎಂ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಭೇಟಿ ಮಾಡಿ ರಾಜ್ಯದ ಕೊರೊನಾ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಸಲಿದ್ದಾರೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕರು ಹಾಗೂ ಆರೋಗ್ಯ ಸಚಿವಾಲಯದ ಇನ್ನಿತರೆ ಅಧಿಕಾರಿಗಳು ಮಾಂಡವಿಯಾ ಅವರೊಂದಿಗೆ ಕೇರಳಕ್ಕೆ ತೆರಳುವುದಾಗಿ ಮೂಲಗಳು ತಿಳಿಸಿವೆ.
ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣಗಳು ಕೇರಳವೊಂದರಿಂದಲೇ ಪತ್ತೆಯಾಗುತ್ತಿವೆ. ಶನಿವಾರ ಹೊಸದಾಗಿ 19,451 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 105 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. "ನಾವು ಇನ್ನಷ್ಟು ಹೆಚ್ಚಿನ ಕೊರೊನಾ ಲಸಿಕೆಗಳಿಗೆ ಕೇಂದ್ರಕ್ಕೆ ಬೇಡಿಕೆಯಿಟ್ಟಿದ್ದೇವೆ. ಕಳೆದ ವಾರಕ್ಕಿಂತ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಸೋಂಕಿನಿಂದ ಆಸ್ಪತ್ರೆ ಸೇರುವವರ ಹಾಗೂ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಆತಂಕಕಾರಿಯಾಗಿಲ್ಲ ಎಂಬುದನ್ನು ಇದು ತೋರುತ್ತಿದೆ. ಸೋಂಕಿನ ನಿಯಂತ್ರಣಕ್ಕೆ ಏನು ಅವಶ್ಯಕತೆಯಿದೆಯೋ ಆ ಕ್ರಮಗಳನ್ನೆಲ್ಲಾ ತೆಗೆದುಕೊಳ್ಳುತ್ತಿದ್ದೇವೆ" ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದರೊಂದಿಗೆ ಓಣಂ ಹಬ್ಬ ಹತ್ತಿರವಾಗುತ್ತಿರುವುದರಿಂದ ಕೇರಳ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಎಲ್ಲೆಲ್ಲಿ ವಾರದ ಸೋಂಕಿನ ಪ್ರಮಾಣ 8ಕ್ಕಿಂತ ಹೆಚ್ಚಿದೆಯೋ ಆ ಪಂಚಾಯಿತಿ ಹಾಗೂ ನಗರದ ವಾರ್ಡ್‌ಗಳಲ್ಲಿ ವಿಶೇಷ ಕಠಿಣ ಲಾಕ್‌ಡೌನ್ ನಿಯಮಗಳನ್ನು ಹೇರಲಾಗಿದೆ. ಕೊರೊನಾ ಲಸಿಕೆ ಪಡೆಯದ 60 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಆಗಸ್ಟ್ 15ರ ಒಳಗೆ ಲಸಿಕೆ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ದೇಶದಲ್ಲೇ ಮೊದಲು ಕೋವಿಡ್ ಪ್ರಕರಣ ದಾಖಲಾದ ಕೇರಳ ರಾಜ್ಯದಲ್ಲಿ ಈಗ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಕೇರಳ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಕ್ರಮ ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಕೇರಳ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ ಮತ್ತು ಕೇಂದ್ರಕ್ಕೆ ವಿವರವಾದ ವರದಿ ಸಲ್ಲಿಸಿದ್ದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನ ನಿರ್ದೇಶಕ ಡಾ. ಸುಜೀತ್ ಕುಮಾರ್ ಸಿಂಗ್ ಕೇರಳದಲ್ಲಿ ಕೊರೊನಾ ಹೆಚ್ಚಳದ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
"ಕೇರಳ ಹೆಚ್ಚಿನ ಸಂಖ್ಯೆಯ ಮರು-ಸೋಂಕಿನ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಈ ಪೈಕಿ ಹಲವರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಾಗಿದ್ದಾರೆ," ಎಂದು ಹೇಳಿದ್ದಾರೆ. ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ಹರಡುವಿಕೆಯು ರಾಜ್ಯದಲ್ಲಿ ಶೇ. 30 ರ ಸಮೀಪದಲ್ಲಿದೆ. ಕೇರಳದ ಪ್ರಸ್ತುತ ಆರ್ ಮೌಲ್ಯ 1.12 ಎಂದು ಉಲ್ಲೇಖ ಮಾಡಿದ ಸುಜೀತ್ ಕುಮಾರ್ ಸಿಂಗ್ "ಪ್ರಸ್ತುತ ಪ್ರವೃತ್ತಿಯ ಪ್ರಕಾರ, ಆಗಸ್ಟ್ 1 ರಿಂದ 20ರ ಅವಧಿಯಲ್ಲಿ, ರಾಜ್ಯವು 4.62 ಲಕ್ಷ ಪ್ರಕರಣಗಳಿಗೆ ಸಾಕ್ಷಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ," ಎಂದಿದ್ದಾರೆ.
ಕೇರಳದಲ್ಲಿ ಸೋಂಕಿನ ನಿಯಂತ್ರಣಕ್ಕೆ ಬಫರ್ ಜೋನ್‌ಗಳನ್ನು ಹೆಚ್ಚಿಸುವ ಅಗತ್ಯವಿದೆ. ಅಲ್ಲದೇ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಆಗಬೇಕಿದೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಈಗ ವಿಧಿಸುವ ನಿರ್ಬಂಧಗಳನ್ನು ಮತ್ತಷ್ಟು ಕಠಿಣವಾಗಿ ಜಾರಿ ಮಾಡುವ ಅಗತ್ಯವಿದೆ. ಕೇರಳದಲ್ಲಿ ಸದ್ಯ ಸೋಂಕಿತರ ಪತ್ತೆ ಪ್ರಮಾಣ 1:5ರಷ್ಟಿದೆ. ಆದರೆ ಇದನ್ನು 1:20ಕ್ಕೆ ಹೆಚ್ಚಳ ಮಾಡಬೇಕಿದೆ. ಇದುವೇ ಸೋಂಕು ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಹೋಂ ಐಸೊಲೇಷನ್ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಕೇಂದ್ರ ಸಮಿತಿ ಹೇಳಿದೆ.



