ನವದೆಹಲಿ: ಭಾರತೀಯರಿಗೆ ಮುಂದಿನ ಮೂರು ದಿನಗಳ ನಂತರ ಸಿಂಗಾಪುರ್ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಏಕೆಂದರೆ ತನ್ನ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧ ಪಟ್ಟಿಯಿಂದ ಭಾರತವನ್ನು ತೆಗೆದು ಹಾಕಿರುವ ಬಗ್ಗೆ ಸಿಂಗಾಪುರ್ ಶನಿವಾರ ಘೋಷಿಸಿದೆ.
ಭಾರತದ ಜೊತೆಗೆ ದಕ್ಷಿಣ ಏಷ್ಯಾದ ಐದು ರಾಷ್ಟ್ರಗಳನ್ನು ಪ್ರಯಾಣ ನಿರ್ಬಂಧಿಸಿದ ರಾಷ್ಟ್ರಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಕೆಲವು ನಿರ್ಬಂಧಗಳನ್ನು ಮುಂದುವರಿಸಲಾಗಿದೆ.
"ಭಾರತ, ಬಾಂಗ್ಲಾದೇಶ ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗೆ 14 ದಿನಗಳ ಪ್ರಯಾಣದ ಇತಿಹಾಸ ಹೊಂದಿರುವ ಎಲ್ಲ ಪ್ರಯಾಣಿಕರು ಬುಧವಾರದಿಂದ ಸಿಂಗಾಪುರ ಪ್ರವೇಶಿಸಲು ಅಥವಾ ಸಿಂಗಾಪುರ ಮೂಲಕ ಪ್ರಯಾಣಿಸುವುಕ್ಕೆ ಅವಕಾಶವಿದೆ," ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
10 ದಿನ ಗೃಹ ದಿಗ್ಬಂಧನ ಕಡ್ಡಾಯ:
ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧ ಪಟ್ಟಿಯಿಂದ ಈ ರಾಷ್ಟ್ರಗಳನ್ನು ತೆಗೆದು ಹಾಕಿದ್ದರೂ ಕೂಡ ಕೆಲವು ಕಠಿಣ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಭಾರತ, ಬಾಂಗ್ಲಾದೇಶ ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಆಗಮಿಸಿದ ಪ್ರಯಾಣಿಕರೇ ಆಗಿದ್ದರೂ, ಸಿಂಗಾಪುರದಲ್ಲಿ 10 ದಿನಗಳವರೆಗೆ ಗೃಹ ದಿಗ್ಬಂಧನದಲ್ಲಿ ಇರುವುದು ಕಡ್ಡಾಯವಾಗಿದೆ.
ರಾಷ್ಟ್ರಗಳಲ್ಲಿ ಕೊವಿಡ್-19 ಪರಿಸ್ಥಿತಿ ಪರಿಶೀಲಿಸಿ ಕ್ರಮ:
ಈ ಹಿಂದೆ ಇದೇ ರಾಷ್ಟ್ರಗಳ ಪ್ರಯಾಣಿಕರಿಗೆ ಸಿಂಗಾಪುರ್ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ರಾಷ್ಟ್ರಗಳಲ್ಲಿನ ಇತ್ತೀಚಿನ ಕೊವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಲಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. "ಈ ಆರು ದೇಶಗಳಲ್ಲಿನ ಕೊರೊನಾವೈರಸ್ ಪರಿಸ್ಥಿತಿ ಸ್ವಲ್ಪ ಸಮಯದವರೆಗೆ ಸ್ಥಿರವಾಗಿದೆ. ಹಾಗಾಗಿ ಈ ರಾಷ್ಟ್ರಗಳ ಪ್ರಯಾಣಿಕರ ಪ್ರವೇಶಕ್ಕೆ ಮತ್ತು ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಅಗತ್ಯವಿಲ್ಲ," ಎಂದು ಆರೋಗ್ಯ ಸಚಿವ ಓಂಗ್ ಯೇ ಕುಂಗ್ ತಿಳಿಸಿದ್ದಾರೆ.
ಸಿಂಗಾಪುರದಲ್ಲಿ ಕೊವಿಡ್-19 ಪರಿಸ್ಥಿತಿ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭವಾದಾಗಿನಿಂದ ಶುಕ್ರವಾರದವರೆಗೂ ಸಿಂಗಾಪುರದಲ್ಲಿ ಒಟ್ಟು 1,65,663 ಕೊವಿಡ್-19 ಪ್ರಕರಣಗಳು ವರದಿಯಾಗಿವೆ. 294 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದರೆ, 29,652 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ 1,35,717 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿರುವ ಬಗ್ಗೆ ವರದಿಯಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ:
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಏರಿಳಿತ ವಾರದಿಂದ ವಾರಕ್ಕೆ ಬದಲಾಗುತ್ತಾ ಸಾಗಿದೆ. ಕಳೆದ 24 ಗಂಟೆಗಳಲ್ಲಿ 16,326 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 17,677 ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಒಟ್ಟು ಗುಣಮುಖರ ಸಂಖ್ಯೆ 3,35,32,126ಕ್ಕೆ ಏರಿಕೆಯಾಗಿದೆ. ಒಂದೇ ದಿನ ಭಾರತದಲ್ಲಿ 666 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 1,73,728 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.




