ಪಣಜಿ: ''ಗಡಿ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆ ನೋಡಿಕೊಂಡು ಸುಮ್ಮನಿರುವ ಕಾಲ ದೂರಾಗಿದೆ, ಗಡಿಯಲ್ಲಿ ಯಾವುದೇ ರೀತಿಯ ಉಪಟಳ, ದಾಳಿಗಳನ್ನೂ ನಾವು ಸಹಿಸುವುದಿಲ್ಲ, ಪರಿಸ್ಥಿತಿ ಹದಗೆಟ್ಟರೆ ಇನ್ನಷ್ಟು ಸರ್ಜಿಕಲ್ ದಾಳಿ ನಡೆಸಬೇಕಾಗುತ್ತದೆ,'' ಎಂದು ಗೃಹ ಸಚಿವ ಅಮಿತ್ ಶಾ ಅವರು ಗುರುವಾರದಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗೃಹಸಚಿವ ಅಮಿತ್ ಶಾ ಅವರು ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗಡಿ ಅತಿಕ್ರಮಣ, ಗಡಿ ಭಾಗದ ನಿಯಮ ಉಲ್ಲಂಘನೆ, ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಮುಂದುವರಿದರೆ ಇನ್ನೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಿರೀಕ್ಷಿಸಿ ಎಂದಿದ್ದಾರೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಹಾಗೂ ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು 2016ರಲ್ಲಿ ನಡೆಸಿದ ಸರ್ಜಿಕಲ್ ದಳಿ ಒಂದು ಮಹತ್ವದ ಹೆಜ್ಜೆ. ಭಾರತದ ಗಡಿ ಪ್ರದೇಶಕ್ಕೆ ತೊಂದರೆ ನೀಡುವ ಯಾರನ್ನೂ ಬಿಡುವುದಿಲ್ಲ ಎಂದು ಸರ್ಜಿಕಲ್ ದಾಳಿ ಮೂಲಕ ಸ್ಪಷ್ಟ ಸಂದೇಶ ನೀಡಿದ್ದೇವೆ. ಈ ಹಿಂದೆ ಮಾತುಕತೆ ಮಾತ್ರ ನಡೆಯುತ್ತಿತ್ತು, ಆದರೆ ಈಗ ಏನಿದ್ದರೂ ಏಟಿಗೆ ತಿರುಗೇಟು ನೀಡುವ ಕಾಲ ಎಂದು ಅಮಿತ್ ಶಾ ಹೇಳಿದರು.
ಪೂಂಚ್ ಬಳಿ ಉಗ್ರರ ದಾಳಿ ನಡೆದಾಗ ತಕ್ಕ ಉತ್ತರ ನೀಡಿದ್ದೆವು, ಈ ಮೂಲಕ ಹೊಸ ಅಧ್ಯಾಯ ಆರಂಭವಾಯಿತು, ಉರಿಯಲ್ಲಿ ಯೋಧರ ಮೇಲೆ ನಡೆದ ಉಗ್ರದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ 29ರಂದು ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು. ಭಾರತ ಸೇನೆ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚಿನ ಉಗ್ರರು ಮೃತರಾಗಿದ್ದರು. ನಂತರ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆದಿತ್ತು. ಸುಮಾರು 40 ಯೋಧರ ಬಲಿದಾನಕ್ಕೆ ಬೆಲೆ ಸಿಗುವಂತೆ ಮಾಡಲು ಭಾರತ ಸರ್ಕಾರ ಮತ್ತೊಮ್ಮೆ ಸರ್ಜಿಕಲ್ ದಾಳಿ ನಡೆಸಲು ಮುಂದಾಯಿತು. ಬಾಲಾಕೋಟ್ ಉಗ್ರರ ತಾಣಗಳ ಮೇಲೆ ಏರ್ಸ್ಟ್ರೈಕ್ ಮೂಲಕ ದಾಳಿ ನಡೆಸಲಾಯಿತು, ಉಗ್ರರ ಉಪಟಳ ಹೆಚ್ಚಾದರೆ ಇದೇ ರೀತಿ ಉತ್ತರ ಸಿಗಲಿದೆ ಎಂದು ಅಮಿತ್ ಶಾ ಎಚ್ಚರಿಸಿದರು.
2022ರಲ್ಲಿ ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ: 2022ರಲ್ಲಿ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಕ್ಷ ಸಂಪೂರ್ಣ ಬಹುಮತ ಗಳಿಸಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಬಹುಮತ ಗಳಿಸದಿದ್ದರೆ, ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿತ್ತೆ? ಸಂವಿಧಾನದ 370ನೇ ಪರಿಚ್ಛೇದ ಬದಲಾವಣೆ, ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಾಗುತ್ತಿತ್ತೆ ಎಂದು ಅಮಿತ್ ಶಾ ಅವರು ಇನ್ನೊಂದು ಕಾರ್ಯಕ್ರಮದ ಭಾಷಣದಲ್ಲಿ ಹೇಳಿದರು.




