HEALTH TIPS

ಕಲ್ಲಡ್ಕದ ಕೆ. ಟಿ. ಹೊಟೇಲ್ ತೆರವು; ಇನ್ನು ಕೆ‌. ಟಿ. ಟೀ ನೆನಪು ಮಾತ್ರ!

               ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ75ರ ಬಿಸಿರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಮತ್ತೆ ಚುರುಕುಗೊಂಡಿದೆ. ಕೆಲ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಹೆದ್ದಾರಿ ಭೂ ಸ್ವಾಧೀನ ಕಾಮಗಾರಿ ಮತ್ತೆ ಚಾಲನೆಗೊಂಡಿದ್ದು, ಬಿ. ಸಿ. ರೋಡ್‌ನಿಂದ ಅಡ್ಡಹೊಳೆಯವರೆಗೆ ರಸ್ತೆ ಬದಿಯಲ್ಲಿದ್ದ ಎಲ್ಲಾ ಅಂಗಡಿಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

              ಈ ರಸ್ತೆ ಕಾಮಗಾರಿಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಪೆಷಲ್ ಚಹಾದ ಮೂಲಕವೇ ಪ್ರಸಿದ್ಧಿಯನ್ನು ಪಡೆದಿದ್ದ ಕಲ್ಲಡ್ಕ ಲಕ್ಷ್ಮೀ ನಿವಾಸ ಹೊಟೇಲ್ ಕೂಡಾ ತೆರವು ಮಾಡಲಾಗಿದೆ. ಭಾರೀ ಪ್ರಸಿದ್ಧಿಯನ್ನು ಪಡೆದಿದ್ದ ಕಲ್ಲಡ್ಕ ಟೀ ಇನ್ನು ನೆನಪು ಮಾತ್ರ.

                  ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರು ಕಲ್ಲಡ್ಕದಲ್ಲಿ ಒಂದು ಚಹಾ ವಿರಾಮ ನೀಡಿ, ಲಕ್ಷ್ಮಿ ನಿವಾಸ ಹೋಟೇಲ್‌ನಲ್ಲಿ ಸ್ಪೆಷಲ್ ಕೆ. ಟಿ. ಯನ್ನು ಕುಡಿದು ಹೋಗುತ್ತಿದ್ದದ್ದು ಇನ್ನು ಇತಿಹಾಸವಾಗಲಿದೆ.

                  107 ವರ್ಷಗಳ ಇತಿಹಾಸವಿರುವ ಕಲ್ಲಡ್ಕ ಟೀ ಹೊಟೇಲ್ ಎಂದೇ ಖ್ಯಾತಿಯಾಗಿದ್ದ ಲಕ್ಷ್ಮೀ ನಿವಾಸ ಹೊಟೇಲ್ ಹೆದ್ದಾರಿ ಅಗಲೀಕರಣಕ್ಕಾಗಿ ತೆರವಾಗಿದೆ. ಹಳೆಯ ಹೊಟೇಲ್‌ನಲ್ಲಿ ಸಿಗುತ್ತಿದ್ದ ಕೆ. ಟಿ. ಚಹಾ ಇನ್ನೂ ಹಲವು ತಿಂಗಳ ಕಾಲ ಗ್ರಾಹರಿಗೆ ದೊರೆಯುವುದಿಲ್ಲ.

            ಕಲ್ಲಡ್ಕದಲ್ಲಿ ಕೆ. ಟಿ. ಖ್ಯಾತಿಯ ಎರಡು ಹೊಟೇಲ್ ಗಳಿವೆ. ಸಹೋದರರಿಬ್ಬರು ನಡೆಸುವ ಲಕ್ಷ್ಮೀ ನಿವಾಸ ಮತ್ತು ಲಕ್ಷ್ಮೀ ಗಣೇಶ್ ಹೊಟೇಲ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕರನೂ ಹಾಲಿನ ನೊರೆಯ ಮೇಲೆ ತೇಲುವ ಚಹಾದ ಸ್ವಾದವನ್ನು ಅಸ್ವಾದಿಸಲೇಂದೇ ಬರುತ್ತಾನೆ. ಕೆ.ಟಿ. ಜೊತೆಗೆ ಕರಾವಳಿಯ ಸ್ಪೆಷಲ್ ಗೋಳಿಬಜೆ, ಬಜ್ಜಿ ರುಚಿ ಸವಿಯುತ್ತಾನೆ.

                ಹೀಗಾಗಿ ಕಲ್ಲಡ್ಕ ಕೆ. ಟಿ. ಚಹಾ ರಾಷ್ಟ್ರ ಮಟ್ಟದಲ್ಲೇ ಪ್ರಸಿದ್ಧಿಯಾಗಿದೆ. ಕಲ್ಲಡ್ಕ ಟೀ ಯ ಪ್ರಮುಖ ಆಕರ್ಷಣೆಯೇ ಹಾಲಿನ ಮೇಲೆ ತೇಲುವ ಚಹಾದ ರಸ. ಈ ರೀತಿಯಾಗಿಯೂ ಚಹಾ ತಯಾರಿಸಬಹುದು ಅಂತಾ ಜಗತ್ತಿಗೆ ತೋರಿಸಿಕೊಟ್ಟಿದ್ದೇ ಕೆ. ಟಿ. ಹೋಟೆಲ್ ವಿಶೇಷತೆ.

ಬಿಸಿನೀರು, ಬಿಸಿ ಹಾಲು, ಬಿಸಿ ಚಹಾದ ರಸ ಇದು ಕಲ್ಲಡ್ಕ ಸೆಷ್ಪಲ್ ಕೆ. ಟಿ. ಚಹಾದ ಗುಟ್ಟು.           ಆನಂತರವಾಗಿ ಈ ರೀತಿಯಾಗಿ ಹಲವು ಮಂದಿ ಚಹಾ ತಯಾರಿಸಲು ಯತ್ನಿಸಿದರೂ ಕಲ್ಲಡ್ಕ ಚಹಾದ ಸರಿಸಾಟಿಯಾಗಿ ಯಾವುದೂ ಬಂದಿಲ್ಲ ಅನ್ನೋದು ಕಲ್ಲಡ್ಕ ಟೀ ಪ್ರೀಯರ ಮಾತು.

                ಕಲ್ಲಡ್ಕದ ಹಳೆಯ ಕೆ. ಟಿ. ಹೋಟೇಲ್ ತೆರವಾದ ಹಿನ್ನಲೆಯಲ್ಲಿ ಇನ್ನೂ ಕೆಲವು ತಿಂಗಳುಗಳ ಕಾಲ ಚಹಾದ ಸ್ವಾದ ಅನುಭವಿಸಲು ಸಿಗದು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಲ್ಲಡ್ಕ ಕೆ. ಟಿ. ಚಹಾ ಪ್ರೀಯ ಸತೀಶ್, "ಕಲ್ಲಡ್ಕಕ್ಕೆ ಹೋದಾಗೆಲ್ಲಾ ಕೆ. ಟಿ. ಚಹಾ ಕುಡಿಯೋದು ಅಭ್ಯಾಸವಾಗಿಬಿಟ್ಟಿತ್ತು. ಕಳೆದ ಹಲವು ವರ್ಷಗಳಿಂದ ಈ ಚಹಾ ಕುಡಿಯುತ್ತಿದ್ದೆ. ಆದರೆ ಈಗ ಹೊಟೇಲ್ ತೆರವಾದ ಬಗ್ಗೆ ತುಂಬಾ ಬೇಜಾರು ಇದೆ. ಮುಂದೆ ಕಲ್ಲಡ್ಕಕ್ಕೆ ಹೋದಾಗೆಲ್ಲಾ ಕೆ. ಟಿ. ಚಹಾದ ನೆನಪು ಆವರಿಸಲಿದೆ" ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

           ಆದರೆ ಈಗಿದ್ದ ಹೊಟೇಲ್ ಹಿಂಭಾಗದಲ್ಲೇ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಟ್ಟಟ ನಿರ್ಮಾಣ ಕಾಮಗಾರಿ ಪೂರ್ತಿಯಾದ ಮೇಲೆ ಅದರಲ್ಲಿ ಕೆ. ಟಿ. ಹೋಟೇಲ್ ಮತ್ತೆ ಕಾರ್ಯಾರಂಭವಾಗಲಿದೆ.

         ಒಟ್ಟಿನಲ್ಲಿ ಬಿ. ಸಿ. ರೋಡು- ಅಡ್ಡಹೊಳೆ ಮಧ್ಯದ 64 ಕಿ. ಮೀ. ಚತುಷ್ಪಥ ಹೆದ್ದಾರಿಯ ಕಾಮಗಾರಿ 2 ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ ಕಾಮಗಾರಿ ಆರಂಭಕ್ಕೆ ಮುನ್ನ ನಡೆಯಬೇಕಾದ ಪೂರ್ವಭಾವಿ ಪ್ರಕ್ರಿಯೆಗಳು ಆರಂಭಗೊಂಡಿದೆ.

          ಕಲ್ಲಡ್ಕದಿಂದ ಮೆಲ್ಕಾರ್ ವರೆಗೂ ಈ ಪ್ರಕ್ರಿಯೆಗಳು ನಡೆಯುತ್ತಿದೆ. ಅಡ್ಡಹೊಳೆಯಿಂದ ಪೆರಿಯಶಾಂತಿ ಹಾಗೂ ಪೆರಿಯಶಾಂತಿಯಿಂದ ಬಿ. ಸಿ. ರೋಡುವರೆಗೆ ಎರಡು ಹಂತದ ಕಾಮಗಾರಿ ನಡೆಯಲಿದ್ದು, ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣವಾಗಲಿದೆ.

               ಕಲ್ಲಡ್ಕ ಪೇಟೆಯ ಹೆಚ್ಚಿನ ಕಟ್ಟಡಗಳು ಹೆದ್ದಾರಿಗಾಗಿ ತೆರವುಗೊಳ್ಳಲಿದ್ದು, ಅವುಗಳನ್ನು ಸ್ಥಳಾಂತರಗೊಳಿಸುವ ಕಾಮಗಾರಿಯೂ ನಡೆಯುತ್ತಿದೆ. ಕೆಲವು ಹಳೆಯ ಕಟ್ಟಡಗಳ ಹಿಂಭಾಗದಲ್ಲಿ ಹೊಸ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದರೆ, ಮತ್ತೆ ಕೆಲವು ಪೇಟೆಯಿಂದ ಹೊರಭಾಗದಲ್ಲಿ ನಿರ್ಮಾಣವಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries