HEALTH TIPS

ಸಾಕ್ಷಿದಾರನು ಅಪರಾಧದ ವೇಳೆ ಆರೋಪಿಯನ್ನು ಪ್ರಥಮ ಬಾರಿ ನೋಡಿದ್ದರೆ ಅದು ದುರ್ಬಲ ಸಾಕ್ಷ್ಯವಾಗುತ್ತದೆ: ಸುಪ್ರೀಂ ಕೋರ್ಟ್

                 ನವದೆಹಲಿ :ಸಾಕ್ಷಿದಾರನು ಆರೋಪಿಯನ್ನು ಅಪರಾಧದ ಸಂದರ್ಭದಲ್ಲಿ ಮೊದಲ ಬಾರಿ ನೋಡಿದ್ದರೆ,ವಿಶೇಷವಾಗಿ ಘಟನೆಯ ದಿನಾಂಕ ಮತ್ತು ಆತ ತನ್ನ ಹೇಳಿಕೆಯನ್ನು ದಾಖಲಿಸಿದ ದಿನಾಂಕಗಳ ನಡುವೆ ಹೆಚ್ಚಿನ ಅಂತರವಿದ್ದರೆ ಆತ ಆರೋಪಿಯನ್ನು ನ್ಯಾಯಾಲಯದಲ್ಲಿ ಗುರುತಿಸಿದಾಗ ಅದು ದುರ್ಬಲ ಸಾಕ್ಷವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

            ಸ್ಪಿರಿಟ್ ಕಳ್ಳಸಾಗಣೆಗಾಗಿ ಕೇರಳ ಅಬಕಾರಿ ಕಾಯ್ದೆಯ 55(ಎ) ) ಕಲಮ್‌ನಡಿ ದೋಷ ನಿರ್ಣಯಗೊಂಡಿರುವ ನಾಲ್ವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಅಜಯ ರಸ್ತೋಗಿ ಮತ್ತು ಅಭಯ ಎಸ್.ಓಕಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

           ಈ ನಾಲ್ವರು ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಲಾರಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ 174 ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ 6,090 ಲೀ.ಸ್ಪಿರಿಟ್ ಸಾಗಿಸುತ್ತಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

           ತಾನು 11 ವರ್ಷಗಳ ಹಿಂದೆ ನೋಡಿದ ಯಾವುದೇ ವ್ಯಕ್ತಿಗಳನ್ನು ಗುರುತಿಸಲು ತನಗೆ ಸಾಧ್ಯವಿಲ್ಲ ಎಂದು ಸಾಕ್ಷಿದಾರ ತಿಳಿಸಿದ್ದ. ಆದಾಗ್ಯೂ 11ವರ್ಷಗಳ ಹಿಂದೆ ಘಟನೆ ನಡೆದಿದ್ದ ಸಂದರ್ಭದಲ್ಲಿ ತಾನು ಮೊದಲ ಬಾರಿಗೆ ನೋಡಿದ್ದ ಇಬ್ಬರು ಆರೋಪಿಗಳನ್ನು ಆತ ಗುರುತಿಸಿದ್ದ. ಈ ಹಿನ್ನೆಲೆಯಲ್ಲಿ ಆತನ ಸಾಕ್ಷಿ ಹೇಳಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿತು.

             ಇಂತಹ ಪ್ರಕರಣದಲ್ಲಿ ಗುರುತು ಪತ್ತೆ ಪರೇಡ್ ಸಾಕ್ಷಿದಾರನು ಆರೋಪಿಗಳನ್ನು ಗುರುತಿಸುವಂತೆ ಮಾಡಬಹುದು ಎಂದು ಶುಕ್ರವಾರ ತನ್ನ ಆದೇಶದಲ್ಲಿ ತಿಳಿಸಿದ ಸರ್ವೋಚ್ಚ ನ್ಯಾಯಾಲಯವು,ಗುರುತು ಪತ್ತೆ ಪರೇಡ್ ತನಿಖೆಯ ಒಂದು ಭಾಗವಾಗಿದೆ ಮತ್ತು ಅದು ವಸ್ತುನಿಷ್ಠ ಸಾಕ್ಷವಲ್ಲ ಎಂದು ಹೇಳಿತು.

          ಆದಾಗ್ಯೂ ಗುರುತು ಪತ್ತೆ ಪರೇಡ್ ನಡೆದಿಲ್ಲ ಎನ್ನುವುದೇ ನ್ಯಾಯಾಲಯದಲ್ಲಿ ಆರೋಪಿಯನ್ನು ಗುರುತಿಸಿರುವ ಸಾಕ್ಷಿಯ ಹೇಳಿಕೆಯನ್ನು ತಿರಸ್ಕರಿಸಲು ಕಾರಣವಾಗದಿರಬಹುದು. ಯಾವುದೇ ಪ್ರಕರಣದಲ್ಲಿ ಸಾಕ್ಷಿಯ ಹೇಳಿಕೆಗೆ ಪೂರಕವಾದ ಇತರ ಅಂಶಗಳೂ ಇರಬಹುದು ಮತ್ತು ಇಂತಹ ಪ್ರಕರಣಗಳಲ್ಲಿ ಸಾಕ್ಷಿಯ ಹೇಳಿಕೆಯನ್ನು ನಂಬಬಹುದು. ಆದರೆ ಈಗ ಪೀಠದ ಎದುರಿನಲ್ಲಿರುವ ಪ್ರಕರಣದಲ್ಲಿ 11ವರ್ಷಗಳ ಹಿಂದೆ ನೋಡಿದ್ದ ಯಾವುದೇ ವ್ಯಕ್ತಿಯನ್ನು ಗುರುತಿಸಲು ತನಗೆ ಸಾಧ್ಯವಿಲ್ಲ ಎಂದು ಸಾಕ್ಷಿ ಒಪ್ಪಿಕೊಂಡಿದ್ದಾನೆ.

               ಅದರೂ ಇಬ್ಬರು ಆರೋಪಗಳನ್ನು ತಾನು ಗುರುತಿಸಬಲ್ಲೆ ಎಂದು ಆತ ಹೇಳಿಕೊಂಡಿದ್ದಾನೆ. ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿ ಅದನ್ನು ನ್ಯಾಯಾಲಯವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ ಪೀಠವು,ಘಟನೆಗೆ ಮೊದಲು ತಾನು ನೋಡಿಯೇ ಇರದಿದ್ದ ಆರೋಪಿಗಳನ್ನು ಸಾಕ್ಷಿದಾರನು 11 ವರ್ಷಗಳ ನಂತರ ಗುರುತಿಸುತ್ತಾನೆ ಎನ್ನುವುದನ್ನು ನಂಬುವುದು ತುಂಬ ಕಷ್ಟ ಮತ್ತು ಎಲ್ಲ ಅಧಿಕೃತ ಸಾಕ್ಷಿಗಳ ವಿಷಯದಲ್ಲಿಯೂ ಇದು ನಡೆಯುತ್ತಿರುತ್ತದೆ. ಲಾರಿಯ ನಿಜವಾದ ನೋಂದಣಿ ಸಂಖ್ಯೆ ಮತ್ತು ಅದರ ಮಾಲಿಕನ ಬಗ್ಗೆ ಸಾಕ್ಷಗಳನ್ನು ಸಲ್ಲಿಸುವುದಕ್ಕೆ ಪ್ರಾಷಿಕ್ಯೂಷನ್ ಆದ್ಯತೆ ನೀಡಿಲ್ಲ. ಹೀಗಾಗಿ ಇಡೀ ಪ್ರಾಸಿಕ್ಯೂಷನ್ ಪ್ರಕರಣವು ಶಂಕಾಸ್ಪದವಾಗಿದೆ ಎಂದು ಹೇಳಿ ಆರೋಪಿಗಳನ್ನು ಬಿಡುಗಡೆಗೊಳಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries