HEALTH TIPS

ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ 'ಕಾವೇರಿ'

              ಮಡಿಕೇರಿ: ಸೂರ್ಯನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ನೆರೆದ ಭಕ್ತರ ಹರ್ಷೋದ್ಘಾರದ ನಡುವೆ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಭಾನುವಾರ ಮಧ್ಯಾಹ್ನ 1.11 ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಈ ಕ್ಷಣಗಳಿಗಾಗಿ ಕಾಯುತ್ತಿದ್ದ ಮಂದಿ ಕಣ್ತುಂಬಿಸಿಕೊಂಡು ಕೃತಾರ್ಥರಾದರು.


               ಅರ್ಚಕ ಗುರುರಾಜಾಚಾರ್, ಕೃಷ್ಣ ಉಪದ್ಯಾಯ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ಕಾವೇರಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಿದ್ದಂತೆಯೇ ತೀರ್ಥವನ್ನು ನೆರೆದವರ ಮೇಲೆ ಪ್ರೋಕ್ಷಿಸಿದರು.

            ಕಳೆದ ಬಾರಿ ಕೋವಿಡ್ ಕಾರಣದಿಂದ ತೀರ್ಥೋದ್ಭವಕ್ಕೆ ಭಕ್ತರಿಗೆ ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿ ಅವಕಾಶ ನೀಡಿದ್ದರೂ ಕೊಳದಲ್ಲಿ ತೀರ್ಥ ಸ್ನಾನ ಮಾಡುವುದಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ಭಾಗಮಂಡಲದಲ್ಲಿಯೇ ಭಕ್ತರು ಕಾವೇರಿ ನದಿಯಲ್ಲಿ ಸ್ನಾನಾಧಿಗಳನ್ನು ಮಾಡಿಕೊಂಡು ತಲಕಾವೇರಿಗೆ ತೆರಳಿ ಕಾವೇರಿ ದರ್ಶನ ಮಾಡಿಕೊಂಡು ಕಾವೇರಿ ತೀರ್ಥವನ್ನು ಮನೆಗೆ ಕೊಂಡೊಯ್ಯುತ್ತಿರುವ ದೃಶ್ಯ ಕಾಣಿಸುತ್ತಿದೆ.

              ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿಯಾಗಿ ಹರಿದು ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381 ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಂದಿಗೆ ತಾನು ಹರಿದಲೆಲ್ಲಾ ಪವಿತ್ರಕ್ಷೇತ್ರಗಳನ್ನು ಸೃಷ್ಟಿಸಿ, ಲಕ್ಷಾಂತರ ಮಂದಿಯ ಪಾಲಿಗೆ ಅನ್ನದಾತೆಯಾಗಿದ್ದಾಳೆ.


                         ಲೋಕ ಕಲ್ಯಾಣಕ್ಕೆ ಹೊರಟ ಕಾವೇರಿ

            ಕಾವೇರಿ ಹುಟ್ಟಿದ್ದೇ ಲೋಕ ಕಲ್ಯಾಣಕ್ಕಾಗಿ ಹೀಗಾಗಿ ಆಕೆಯನ್ನು ಅಗಸ್ತ್ಯ ಮುನಿಗೆ ಮದುವೆ ಮಾಡಿಕೊಟ್ಟರೂ ಆಕೆ ವಿವಾಹವಾಗುವ ಮುನ್ನ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು ಒಂದು ವೇಳೆ ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಭಾಷೆ ಪಡೆದುಕೊಂಡಿರುತ್ತಾಳೆ.

           ಆದರೆ ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ತಮ್ಮ ಆಶ್ರಮದಲ್ಲಿ ಕಾವೇರಿಯೊಂದಿಗೆ ಆನಂದದಿಂದ ದಿನ ಕಳೆಯುತ್ತಿರುತ್ತಾರೆ. ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದುಕೊಳ್ಳುತ್ತಾರೆ.

                             ಕಾವೇರಿ ಮಾತೆಯ ದರ್ಶನ

           ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಆಕೆಗೆ ಪತಿಯ ಮೇಲೆ ಕೋಪಬರುತ್ತದೆ ಅಲ್ಲದೆ ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ. ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿಯುತ್ತಾಳೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ಭಕ್ತರಿಗೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾಳೆ ಎಂಬುದು ಭಕ್ತರ ನಂಬಿಕೆಯಾಗಿದೆ.

ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದ ಸ್ನಾನಕೊಳದಲ್ಲಿ ನೂತನವಾಗಿ ವಿವಾಹವಾದವರು ಕೈಕೈ ಹಿಡಿದುಕೊಂಡು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲವನ್ನು ಹಾಕಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಕಾವೇರಿ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲದಲ್ಲಿ ತನ್ನ ಸ್ವರೂಪ ಪ್ರದರ್ಶಿಸಿ ಬಳಿಕ ಹರಿದು ಸಾಗುವ ಸ್ಥಳದಲ್ಲೆಲ್ಲ ಪವಿತ್ರ ಕ್ಷೇತ್ರ ಸೃಷ್ಠಿ ಮಾಡಿರುವುದನ್ನು ನಾವು ಕಾಣಬಹುದು.

                            ಕಾವೇರಿಗಾಗಿ ಸಪ್ತ ಮಹರ್ಷಿಗಳ ಮೊರೆ

            ಕಾವೇರಿ ಭಾಗಮಂಡಲದಿಂದ ಮುಂದೆ ನದಿಯಾಗಿ ಹರಿದು ಚೇರಂಬಾಣೆ, ಹರಿಶ್ಚಂದ್ರ, ಬಲಮುರಿ, ಬೇತ್ರ್ರಿಯ ಮೂಲಕ ರಭಸದಿಂದ ಹರಿಯುತ್ತಾಳೆ. ಈ ಸಂದರ್ಭ ಆಕೆಯ ಹಿಂದೆಯೇ ಪತಿ ಅಗಸ್ತ್ಯ ಮಹರ್ಷಿಯೂ ಧಾವಿಸುತ್ತಾನೆ. ಅಲ್ಲದೆ ಆಕೆಯನ್ನು ನಿಲ್ಲುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಾನೆ. ಅಲ್ಲದೆ ಮರಳಿನ ಲಿಂಗ ಮಾಡಿಯೂ ಪೂಜಿಸುತ್ತಾನೆ. ಆದರೆ, ಇದ್ಯಾವುದಕ್ಕೂ ಮಣಿಯದ ಕಾವೇರಿ ಮುಂದಕ್ಕೆ ಹರಿಯ ತೊಡಗುತ್ತಾಳೆ. ಕೊಡಗಿನ ಸಿದ್ದಾಪುರ ಬಳಿಯ ಗುಹ್ಯಕ್ಕೆ ಬರುತ್ತಿದ್ದಂತೆಯೇ ಅಗಸ್ತ್ಯ ಮಹರ್ಷಿಯು ಕಡೆಯ ಪ್ರಯತ್ನ ಎಂಬಂತೆ ಸಪ್ತ ಮಹರ್ಷಿಗಳ ಮೊರೆ ಹೋಗುತ್ತಾನೆ. ಪ್ರತ್ಯಕ್ಷರಾದ ಮಹರ್ಷಿಗಳು ಕಾವೇರಿಯನ್ನು ನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಮಹರ್ಷಿಗಳ ಕೋರಿಕೆಗೆ ಮನ್ನಣೆ ನೀಡಿ ಕಾವೇರಿಯು ಗುಹ್ಯದಲ್ಲಿ ನಿಲ್ಲುತ್ತಾಳೆ. ಇಲ್ಲಿರುವ ಅಶ್ವತ್ಥ ಮರದ ಕೆಳಗೆ ಸಂಧಾನದ ಮಾತುಕತೆಯೂ ನಡೆಯುತ್ತದೆ. ಆದರೆ, ಕಾವೇರಿಯು ತಾನು ಲೋಕ ಕಲ್ಯಾಣಕ್ಕೆ ಹೊರಟಿದ್ದು, ತನ್ನನ್ನು ತಡೆಯಬಾರದಾಗಿ ವಿನಂತಿಸಿಕೊಳ್ಳುತ್ತಾಳೆ. ಅಲ್ಲದೆ, ಮುಂದಕ್ಕೆ ಹರಿಯುತ್ತಾಳೆ.

                        ಒಂದು ತಿಂಗಳ ಕಾಲ ನೆಲೆಸುವ ಕಾವೇರಿ

             ಇತ್ತ ನೊಂದ ಅಗಸ್ತ್ಯ ಮಹರ್ಷಿಯು ಸಂಧಾನ ನಡೆದ ಊರಿನಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾನೆ. ಇದೇ ಗುಹ್ಯದ ಅಗಸ್ತ್ಯೇಶ್ವರವಾಗಿದೆ. ಸಂಧಾನ ನಡೆಸಿದ ಅಶ್ವತ್ಥ ಮರವು ಈಗಲೂ ದೇವಾಲಯದ ಬಳಿ ಇರುವ ಮರವೇ ಆಗಿದೆ ಎಂದು ಇಲ್ಲಿನವರು ನಂಬುತ್ತಾರೆ. ಒಟ್ಟಾರೆಯಾಗಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಉದ್ಭವಿಸಿರುವ ಕಾವೇರಿ ಇನ್ನು ಒಂದು ತಿಂಗಳ ಕಾಲ ಬ್ರಹ್ಮಕುಂಡಿಕೆಯಲ್ಲಿ ಆಕೆ ಇರುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ತೀರ್ಥೋದ್ಭವದ ದಿನ ತಲಕಾವೇರಿಗೆ ಆಗಮಿಸಲು ಸಾಧ್ಯವಾಗದ ಭಕ್ತರು ಇತರೆ ದಿನಗಳಲ್ಲಿ ಆಗಮಿಸಿ ತಾಯಿಯ ದರ್ಶನ ಮಾಡುತ್ತಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries