ಬೆಂಗಳೂರು: ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್‌ಗೆ ಶುಭ ಸುದ್ದಿ ಸಿಕ್ಕಿದೆ. ಕರ್ನಾಟಕದ ಮನಿ ಲಾಂಡ್ರಿಂಗ್ ಪ್ರಕರಣದ ಆರೋಪಿತ ಬಿನೀಶ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದಾಗ, ಹೈಕೋರ್ಟಿಗೆ ಅರ್ಜಿ ಹಾಕಿದ್ದ ಬಿನೀಶ್ ಅವರಿಗೆ ಏಕ ಸದಸ್ಯ ಪೀಠದಿಂದ ಜಾಮೀನು ಸಿಕ್ಕಿದೆ. ನ್ಯಾ. ಎಂ.ಜಿ ಉಮಾ ಅವರಿದ್ದ ನ್ಯಾಯಪೀಠವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ. ಅಕ್ಟೋಬರ್ 29, 2020ರಿಂದ ಬಿನೀಶ್ ಕಸ್ಟಡಿಯಲ್ಲಿದ್ದಾರೆ.
ಕೇರಳದ ಸಿಪಿಐ(ಎಂ) ಕಾರ್ಯದರ್ಶಿ ಕೆ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಅವರು ಬೆಂಗಳೂರಿನ ಸೆಲೆಬ್ರಿಟಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ, ಅನೂಪ್ ಜೊತೆ ಸಂಪರ್ಕ ಹೊಂದಿದ್ದಾರೆ. ಕಮ್ಮನಹಳ್ಳಿಯಲ್ಲಿ ಅನೂಪ್ ಆರಂಭಿಸಿದ ರೆಸ್ಟೋರೆಂಟ್ ಮೇಲೆ ಬಿನೀಶ್ 50 ಲಕ್ಷ ಹೂಡಿಕೆ ಮಾಡಿದ್ದಾರೆ ಎಂಬುದು ಈಗ ವಿಚಾರಣೆ ಹಂತದಲ್ಲಿದೆ.
ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್ ಹೋಟೆಲ್ ವಹಿವಾಟಿಗೆ ಬಿನೀಶ್ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆ, ಪಿಎಂಎಲ್‌ಎ ಕಾಯ್ದೆ ಉಲ್ಲಂಘನೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ NCB ಕಚೇರಿಯಲ್ಲಿ ಬಿನೀಶ್ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ವೇಳೆಯಲ್ಲಿ ಅನೂಪ್ ನನ್ನ ಸ್ನೇಹಿತ ಆತನಿಗೆ ಹಣಕಾಸು ತೊಂದರೆ ಇತ್ತು. ಹೀಗಾಗಿ 6 ಲಕ್ಷ ನೀಡಿದ್ದೆ. ಮತ್ತೊಮ್ಮೆ ಬೆಂಗಳೂರಿನಿಂದ ಕೊಚ್ಚಿಗೆ ಬರಲು ಹಣ ಇಲ್ಲ ಎಂದಿದ್ದಾಗ 15, 000 ನೀಡಿದ್ದೆ ಎಂದು ಬಿನೀಶ್ ಹೇಳಿಕೆ ನೀಡಿದ್ದ. ಅನೂಪ್ ಹಾಗೂ ಬಿನೀಶ್ ನಡುವಿನ ಆರ್ಥಿಕ ವ್ಯವಹಾರ ವಿದೇಶಕ್ಕೂ ವ್ಯಾಪಿಸಿದ್ದು, ಈ ಬಗ್ಗೆ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.




