ಪತ್ತನಂತಿಟ್ಟ: ಭಾರೀ ಮಳೆಯಿಂದಾಗಿ ಮಣಿಮಾಲಾ ಮತ್ತು ಪಂಪಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುವಲ್ಲ, ಚಂಗನಾಶೇರಿ ನಗರ ಪ್ರದೇಶಗಳು ಮತ್ತು ಕವಿಯೂರು, ಕುನ್ನಂತನಂ, ಕುತ್ತೂರು, ತಿರುವನಂತಪುರ, ನಿರಣಂ, ಕಡಪ್ರಾ, ಪೆರಿಂಗರ, ನೆಡುಂಬರಂ, ವಾಜಪ್ಪಳ್ಳಿ, ತೃಕ್ಕೋಡಿತನಂ, ಪಾಯಿಪಡ್ ಮತ್ತು ಕುಟ್ಟನಾಡ್ ಪ್ರದೇಶಗಳಲ್ಲಿ ಮುಂದಿನ ಸೂಚನೆ ಬರುವವರೆಗೆ ಸರಬರಾಜು ವೈತ್ಯಯಗೊಳ್ಳಲಿದೆ.
ಮಳೆ ತೀವ್ರಗೊಂಡಂತೆ, ನೀರು ಸರಬರಾಜು ಕೊಳವೆಗಳು ಹಾನಿಗೊಳಗಾಗಿವೆ. ಇದರ ಜೊತೆಯಲ್ಲಿ, ನದಿಗಳಲ್ಲಿನ ಕಲುಷಿತ ನೀರಿನಿಂದಾಗಿ ಪಂಪಿಂಗ್ ವ್ಯವಸ್ಥೆಯು ಹಾಳಾಗಿದೆ. ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ.
ಏತನ್ಮಧ್ಯೆ, ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ 23 ಜನರು ಸಾವನ್ನಪ್ಪಿದ್ದಾರೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತದಲ್ಲಿ ಹೆಚ್ಚಿನ ಶವಗಳು ಪತ್ತೆಯಾಗಿವೆ ಇಡುಕ್ಕಿಯ ಕೊಕ್ಕಾಯಾರ್ ನಲ್ಲಿ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಆರು ಜನರ ಮೃತದೇಹಗಳು ಕೂಡ ಪತ್ತೆಯಾಗಿವೆ.

