ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಮತದಾನ ನಡೆಯಿತು.
ಪರಿಷತ್ತು ನೀಡಿರುವ ಭಾವಚಿತ್ರ ಸಹಿತ ಗುರುತಿನ ಚೀಟಿ ತರದವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸರ್ಕಾರದಿಂದ ಮಾನ್ಯತೆ ಹೊಂದಿರುವ, ಭಾವಚಿತ್ರ ಇರುವ ಗುರುತಿನ ಚೀಟಿ ತೋರಿಸಿದರೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮತದಾನ ಮಾಡಿದವರ ಎಡಗೈ ಮಧ್ಯದ ಬೆರಳಿಗೆ ಶಾಹಿ ಹಾಕಲಾಯಿತು. ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿತ್ತು.
ಈ ಬಾರಿ 3 ಲಕ್ಷಕ್ಕೂ ಅಧಿಕ ಮಂದಿ ಮತ ಚಲಾಯಿಸಲು ಅರ್ಹರಾಗಿದ್ದರು. ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಮತ ಚಲಾವಣೆ ನಡೆಯಿತು. 400ಕ್ಕೂ ಅಧಿಕ ಮತಗಟ್ಟೆಗಳಿದ್ದವು. ರಾಜ್ಯಾಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.
ಯಾದಗಿರಿ ಜಿಲ್ಲಾ ಘಟಕ ಹಾಗೂ ತಮಿಳುನಾಡು ಗಡಿನಾಡ ಘಟಕದ ಅಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ಮಾತ್ರ ಕಣದಲ್ಲಿದ್ದರು. ಹೀಗಾಗಿ, ಅಲ್ಲಿ ಅವಿರೋಧ ಆಯ್ಕೆ ನಡೆಯಿತು. ಗೋವಾ ಗಡಿನಾಡು ಘಟಕಕ್ಕೆ ಯಾವುದೇ ಅಭ್ಯರ್ಥಿ ಸ್ಪರ್ಧಿಸಿಲ್ಲ.




