HEALTH TIPS

ಇಬ್ಬರು ತ್ರಿಪುರಾ ಪತ್ರಕರ್ತೆಯರ ಬಂಧನಕ್ಕೆ ಸಂಪಾದಕರ ಒಕ್ಕೂಟ ಖಂಡನೆ

       ನವದೆಹಲಿ: 'ರಾಜ್ಯ ಸರ್ಕಾರದ ವರ್ಚಸ್ಸಿಗೆ ಹಾನಿ ತರುವಂತಹ ವರದಿ ಪ್ರಕಟಿಸಿದ್ದಾರೆಂಬ ದೂರಿನ ಮೇಲೆ ದಾಖಲಾಗಿರುವ ಎಫ್‌ಐಆರ್ ಆಧಾರದ ಮೇಲೆ ತ್ರಿಪುರಾದ ಇಬ್ಬರು ಪತ್ರಕರ್ತೆಯರನ್ನು ಬಂಧಿಸಿರುವ ಅಸ್ಸಾಂ ಪೊಲೀಸರ ಕ್ರಮವನ್ನು ಭಾರತೀಯ ಸಂಪಾದಕರ ಒಕ್ಕೂಟ (ಎಡಿಟರ್ಸ್‌ ಗಿಲ್ಡ್‌ ಆಫ್ ಇಂಡಿಯಾ) ಮತ್ತು ಇಂಡಿಯನ್ ವುಮೆನ್ಸ್‌ ಪ್ರೆಸ್‌ ಕಾರ್ಪ್ಸ್‌(ಐಡಬ್ಲ್ಯುಪಿಸಿ) ಖಂಡಿಸಿದೆ.

       ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಒಕ್ಕೂಟ, 'ಪೊಲೀಸರ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಖಂಡಿಸುತ್ತದೆ. ಬಂಧಿಸಿರುವ ಪತ್ರಕರ್ತೆಯರನ್ನು ತಕ್ಷಣವೇ ಬಿಡುಗಡೆ ಮಾಡಿ, ಅವರ ಮುಕ್ತ ಸಂಚಾರ ಸ್ವಾತಂತ್ರ್ಯವನ್ನು ರಕ್ಷಿಸಬೇಕು' ಎಂದು ಒತ್ತಾಯಿಸಿದೆ.

       ಐಡಬ್ಲ್ಯುಪಿಸಿ ಕೂಡ ಪೊಲೀಸರ ಕ್ರಮವನ್ನು ಖಂಡಿಸಿದೆ. 'ಬಂಧಿತ ಪತ್ರಕರ್ತೆಯರನ್ನು ವಿಚಾರಣೆಗಾಗಿ ತ್ರಿಪುರಾಕ್ಕೆ ಕರೆತರುತ್ತಾರೆಂದು ತಿಳಿದಿದ್ದೇವೆ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪತ್ರಕರ್ತೆಯರಿಗೆ ತಮ್ಮ ಕೆಲಸವನ್ನು ನಿರ್ಭೀತವಾಗಿ ಮಾಡಲು ಅವಕಾಶ ನೀಡಬೇಕು' ಎಂದು ಸಂಘಟನೆ ಒತ್ತಾಯಿಸಿದೆ.

      ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಘಟನೆಗಳ ಕುರಿತು ಮಾಡಿದ ವರದಿಯಲ್ಲಿ ಸರ್ಕಾರದ ಗೌರವಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಎಚ್‌ಡಬ್ಲ್ಯು ನ್ಯೂಸ್‌ ನೆಟ್‌ವರ್ಕ್‌ನ ಪತ್ರಕರ್ತೆಯರಾದ ಸಮೃದ್ಧಿ ಸುಕುನಿಯಾ ಮತ್ತು ಸ್ವರ್ಣಾ ಝಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ಆಧರಿಸಿ, ತ್ರಿಪುರಾಕ್ಕೆ ತೆರಳುತ್ತಿದ್ದ ಇವರನ್ನು ಕರೀಂಗಂಜ್‌ನ ನೀಲಂಬಜಾರ್‌ನಲ್ಲಿ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಇದನ್ನು ಎರಡೂ ರಾಜ್ಯಗಳ ಪೊಲೀಸರು ಭಾನುವಾರ ಖಚಿತಪಡಿಸಿದ್ದಾರೆ. ‌

      ಬಂಧಿತರನ್ನು ಸರ್ಕಾರ ನಡೆಸುವ ಆಶ್ರಯ ಮನೆಯಲ್ಲಿ ರಾತ್ರಿ ಇರಿಸಲಾಗಿದ್ದು, ಸೋಮವಾರ ತ್ರಿಪುರಾ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಸ್ಸಾಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

       ಇವರನ್ನು ಸಿಲ್ಚಾರ್‌ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ. 'ತ್ರಿಪುರಾ ಪೊಲೀಸರು, ಇವರನ್ನು ಬಂಧಿಸುವಂತೆ ತಮಗೆ ಸೂಚಿಸಿದ್ದರು ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

       ಇಬ್ಬರು ಪತ್ರಕರ್ತೆಯರ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಬೆಂಬಲಿಗರೊಬ್ಬರು ನೀಡಿದ ದೂರಿನ ಮೇಲೆ ಫಾಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನು ಆಧರಿಸಿ, ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

      ಇದಕ್ಕೂ ಮುನ್ನ ಸುಕುನಿಯಾ ಅವರು, 'ನಮ್ಮನ್ನು ಅಸ್ಸಾಂನ ಕರಿಂಗಂಜ್‌ನ ನೀಲಂಬಜಾರ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಗೋಮತಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೇಲೆ ನಮ್ಮನ್ನು ಬಂಧಿಸಿರುವುದಾಗಿ ನೀಲಂಬಜಾರ್‌ ಠಾಣೆಯ ಉಸ್ತುವಾರಿ ಅಧಿಕಾರಿ ತಿಳಿಸಿದರು' ಎಂದು ಟ್ವೀಟ್‌ ಮಾಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries