ತಿರುವನಂತಪುರ: ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಕಟು ಟೀಕೆ ಮಾಡಿದ್ದಾರೆ. ನಾಲ್ಕು ದಿನಗಳಲ್ಲಿ ಅಟ್ಟಪ್ಪಾಡಿ ಭಾಗದಲ್ಲಿ ಐವರು ಮಕ್ಕಳ ಕಗ್ಗೊಲೆಗೆ ಸರ್ಕಾರವೇ ಕಾರಣ ಎಂದು ಆರೋಪಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬುಡಕಟ್ಟು ಪ್ರದೇಶಗಳನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಕೆ.ಸುಧಾಕರನ್ ಆರೋಪಿಸಿದ್ದಾರೆ.ಫೇಸ್ ಬುಕ್ ಪೋಸ್ಟ್ ಮೂಲಕ ಕೆಪಿಸಿಸಿ ಅಧ್ಯಕ್ಷರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪೌಷ್ಠಿಕಾಂಶ ಕಾರ್ಯಕ್ರಮ ‘ಜನನಿ ಜನ್ಮರಕ್ಷಾ’ವನ್ನು ಸಂಪೂರ್ಣವಾಗಿ ತಡೆಹಿಡಿದು ತಿಂಗಳಿಂದ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಆದಿವಾಸಿ ತಾಯಂದಿರು ಗಂಭೀರ ಆರೋಪ ಮಾಡುತ್ತಿದ್ದಾರೆ. ಅಪೌಷ್ಟಿಕತೆಯಿಂದ ಶಿಶುಗಳ ಸಾವು ಸಂಭವಿಸಿದೆ ಎಂದು ಬುಡಕಟ್ಟು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಸಹ ಸಾಕ್ಷ್ಯ ನೀಡಿರುವರು. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುಧಾಕರನ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಗ್ರಾಮಗಳಲ್ಲಿ ಆರೋಗ್ಯ ಮತ್ತು ಸಮಾಜ ಕಲ್ಯಾಣ ಚಟುವಟಿಕೆಗಳನ್ನು ಸಮನ್ವಯಗೊಳಿಸುವಲ್ಲಿ ಆರೋಗ್ಯ ಇಲಾಖೆ ಹಾಗೂ ಗಿರಿಜನ ಕಲ್ಯಾಣ ಇಲಾಖೆ ವಿಫಲವಾಗಿದೆ ಎಂದು ಸುಧಾಕರನ್ ಆರೋಪಿಸಿರುವರು.




