ಪುಣೆ: ಕೋವಿಡ್ ಸಾಂಕ್ರಾಮಿಕದಿಂದಾಗಿ ಶಾಲೆಗಳು ಮುಚ್ಚುಗಡೆಗೊಂಡ ಎರಡು ವರ್ಷಗಳ ಬಳಿಕ ಭೌತಿಕ ತರಗತಿಗಳು ಪುನರಾರಂಭಗೊಂಡಿದ್ದು, ಆನ್ ಲೈನ್ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಒರೆಗೆ ಹಚ್ಚಲು ಶುಕ್ರವಾರ ದೇಶಾದ್ಯಂತ ರಾಷ್ಟ್ರೀಯ ಮೌಲ್ಯಮಾಪನ ಸಮೀಕ್ಷೆಯನ್ನು ನಡೆಸಲಾಗಿತ್ತು.
ಶಾಲೆಗೆ ಕೊನೆಯ ಬಾರಿ ಹಾಜರಾಗಿದ್ದಾಗ ಒಂದನೇ ತರಗತಿಯಲ್ಲಿ ಓದುತ್ತಿದ್ದ ಎಂಟರ ಹರೆಯದ ಈ ಮಕ್ಕಳಿಗೆ ಒಂದು ದಿನವಾದರೂ ಸರಿಯೇ,ತಾವು ತರಗತಿಯಲ್ಲಿ ಇದ್ದುದು ಸಂಭ್ರಮವನ್ನುಂಟು ಮಾಡಿತ್ತು. ಆದರೆ ಈ ಸಂಭ್ರಮ ಬಹಳ ಹೊತ್ತು ಉಳಿದಿರಲಿಲ್ಲ. 'ಕಠಿಣ ' ಪ್ರಶ್ನೆಗಳು ಅವರನ್ನು ತಬ್ಬಿಬ್ಬುಗೊಳಿಸಿದ್ದವು. ಹೆಚ್ಚಿನವರಿಗೆ ಪ್ರಶ್ನೆಗಳನ್ನು ಓದುವುದೇ ಕಷ್ಟವಾಗಿತ್ತು ಮತ್ತು ಕೆಲವರು ಅಸೆಸ್ಮೆಂಟ್ ಶೀಟುಗಳ ಮೇಲೆ ತಮ್ಮ ಹೆಸರುಗಳನ್ನು ಬರೆಯಲೂ ಪರದಾಡಿದ್ದರು. 'ಕೋವಿಡ್ ಅವಧಿಯಲ್ಲಿ ನಾವು ಆನ್ ಲೈನ್ ತರಗತಿಗಳನ್ನು ನಡೆಸಿದ್ದೆವು,ಆದರೆ ಶೇ.50ರಷ್ಟೂ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ..ತಮ್ಮ ಬಳಿ ಇಂಟರ್ನೆಟ್ ಸೌಲಭ್ಯವಿಲ್ಲ, ಇದ್ದರೂ ಮನೆಯಲ್ಲಿರುವ ಒಂದೇ ಸ್ಮಾರ್ಟ್ ಫೋನ್ ಅನ್ನು ಹಿರಿಯ ಮಗು ಬಳಸುತ್ತಿದೆ. ಮಕ್ಕಳು ಆನ್ ಲೈನ್ ತರಗತಿಗೆ ಹಿಂಜರಿಯುತ್ತಿದ್ದಾರೆ ಎಂದೆಲ್ಲ ಪೋಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು.
ಇವೆಲ್ಲದರ ಫಲಿತಾಂಶ ಇಂದು ನಮ್ಮ ಕಣ್ಣ ಮುಂದಿದೆ. ಹಲವಾರು ಮಕ್ಕಳಿಗೆ ಪ್ರಶ್ನೆಗಳನ್ನು ಓದಲು ಸಾಧ್ಯವಾಗುತ್ತಿಲ್ಲ. ಅವರಿಗಾಗಿ ನಾವು ಪ್ರಶ್ನೆಗಳನ್ನು ಓದಿ ಹೇಳಿದ ಬಳಿಕವಷ್ಟೇ ಉತ್ತರಗಳನ್ನು ಬರೆಯಲು ಅವರಿಗೆ ಸಾಧ್ಯವಾಗಿದೆ. ಈವರೆಗೆ ನಾವು ಕೇವಲ ಮೌಖಿಕ ಪರೀಕ್ಷೆಗಳನ್ನು ನಡೆಸುತ್ತಿದ್ದೆವು ಮತ್ತು ಅದು ಅವರಿಗೆ ಅಭ್ಯಾಸವಾಗಿರಬಹುದು. ಅಲ್ಲದೆ ಬರೆಯುವ ಅಭ್ಯಾಸವೂ ಅವರಿಗೆ ತಪ್ಪಿದೆ, ಹಲವಾರು ಮಕ್ಕಳು ಬರೆಯಲೂ ಪರದಾಡುತ್ತಿದ್ದರು 'ಎಂದು ಮುಹಮ್ಮದ್ ವಾಡಿಯ ನ್ಯೂ ಇಂಗ್ಲೀಷ್ ಸ್ಕೂಲ್ ಪ್ರಭಾರ ಪ್ರಾಂಶುಪಾಲರಾದ ಆಸಿಯಾ ಮುಷ್ರಿಫ್ ಹೇಳಿದರು.
ಪರೀಕ್ಷೆಗಳು ಒಎಂಆರ್ ಶೀಟುಗಳು ಆಧಾರಿತವಾಗಿದ್ದರಿಂದ ವಿದ್ಯಾರ್ಥಿಗಳ ಬದಲು ಅವುಗಳನ್ನು ಖುದ್ದಾಗಿ ತುಂಬುವಂತೆ ರಾಜ್ಯ ಶಿಕ್ಷಣ ಇಲಾಖೆಯಿಂದ ನೇಮಕಗೊಂಡಿದ್ದ ಪರೀಕ್ಷಕರಿಗೆ ತಿಳಿಸಲಾಗಿತ್ತು.
' ಒಎಂಆರ್ ಶೀಟ್ನಲ್ಲಿ ಏನಾದರೂ ತಪ್ಪಿದ್ದರೆ ಅದು ತಿರಸ್ಕರಿಸಲ್ಪಡುತ್ತದೆ, ಹೀಗಾಗಿ ವಿದ್ಯಾರ್ಥಿಗಳ ಉತ್ತರವನ್ನು ಆಧರಿಸಿ ಈ ಶೀಟ್ ಗಳನ್ನು ಖುದ್ದಾಗಿ ತುಂಬುವಂತೆ ನಾವು ತರಬೇತಿ ಸಮಯದಲ್ಲಿ ಪರೀಕ್ಷಕರಿಗೆ ಸೂಚಿಸಿದ್ದೆವು ' ಎಂದು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿಯ ಉಪ ನಿರ್ದೇಶಕ (ಸಂಶೋಧನೆ ಮತ್ತು ತರಬೇತಿ) ವಿಕಾಸ ಗರಡ್ ಅವರು ದೃಢಪಡಿಸಿದರು.
ಆದರೆ ಮೇಲಿನ ತರಗತಿಗಳ ವಿದ್ಯಾರ್ಥಿಗಳಿಗೆ ಇಂತಹ ತೊಂದರೆಗಳು ಎದುರಾಗಿರಲಿಲ್ಲ ಎಂದು ವಿವಿಧ ಶಾಲೆಗಳ ಪ್ರಾಂಶುಪಾಲರು ತಿಳಿಸಿದರು.




