ಪೆರ್ಲ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್(ಕೆಪಿಎಸ್ ಟಿ ಎ) ಎಣ್ಮಕಜೆ ಬ್ರಾಂಚ್ ಸಮ್ಮೇಳನ ಶೇಣಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.ಸಮ್ಮೇಳನವನ್ನು ಸಂಘಟನೆಯ ಕುಂಬಳೆ ಉಪಜಿಲ್ಲಾ ಕೋಶಾಧಿಕಾರಿ ನಿರಂಜನ ರೈ ಪೆರಡಾಲ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಹಣವನ್ನು ಸರಿಯಾಗಿ ನೀಡದೆ ಸರ್ಕಾರ ವಂಚಿಸಿದೆ. ಹಾಲು ಮತ್ತು ಮೊಟ್ಟೆಯನ್ನು ವಾರದಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸಿ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿ, ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಜ್ಯ ಕೌನ್ಸಿಲರ್ ಯೂಸುಫ್ ಮಾಸ್ತರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಸಂಘಟನಾ ಚರ್ಚೆ, ವಿಚಾರಗೋಷ್ಠಿ ನಡೆಯಿತು. ಜತೆ ಕಾರ್ಯದರ್ಶಿ ಶರತ್ ಚಂದ್ರ ಶೆಟ್ಟಿ ಸ್ವಾಗತಿಸಿ, ಸದಸ್ಯ ಸುಕುಮಾರ ಮಾಸ್ತರ್ ವಂದಿಸಿದರು. ಶ್ರೀಧರ ಮಾಸ್ತರ್ ಶೇಣಿ ಕಾರ್ಯಕ್ರಮ ನಿರೂಪಿಸಿದರು. ನೂತನ ಬ್ರಾಂಚ್ ಸಮಿತಿ ರೂಪಿಸಲಾಯಿತು.




