ಬದಿಯಡ್ಕ: ಮುಸ್ಲಿಂಲೀಗ್ ನ ಮಾಹಿನ್ ಕೇಳೋಟ್ ಅವರು ಎಲ್‍ಡಿಎಫ್ ಪಕ್ಷದ ಸದಸ್ಯರ ಬೆಂಬಲದೊಂದಿಗೆ ಬದಿಯಡ್ಕ ಗ್ರಾಮಪಂಚಾಯಿತಿಯ ಯೋಜನಾ ಸಮಿತಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಬಿಜೆಪಿಯ ಮಹೇಶ್ ವಳಕ್ಕುಂಜ ಅವರು ಉಪಾಧ್ಯಕ್ಷರಾಗಿದ್ದರು. ಎಲ್‍ಡಿಎಫ್‍ನ ಸದಸ್ಯರೋರ್ವರು ಮಾಹಿನ್ ಅವರ ಹೆಸರನ್ನು ಸೂಚಿಸಿ, ಎಲ್‍ಡಿಎಫ್ ಬೆಂಬಲಿತ ಪಕ್ಷೇತರ ಸದಸ್ಯೆ ಅನುಮೋದನೆಯನ್ನು ನೀಡಿದ್ದರು. ಯುಡಿಎಫ್ ಹಾಗೂ ಎಲ್‍ಡಿಎಫ್‍ನ ಎಲ್ಲಾ ಸದಸ್ಯರು ಮಾಹಿನ್ ಪರವಾಗಿ ಕೈ ಎತ್ತಿ ಬಹಿರಂಗ ಬೆಂಬಲ ಸೂಚಿಸುವುದರೊಂದಿಗೆ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ನಷ್ಟವಾಯಿತು.
19 ಮಂದಿ ಸದಸ್ಯರಲ್ಲಿ ಯುಡಿಎಫ್ 8, ಬಿಜೆಪಿ 8 ಹಾಗೂ ಎಲ್‍ಡಿಎಫ್ 3 ಸ್ಥಾನವನ್ನು ಹೊಂದಿದೆ. ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಮುಸ್ಲಿಂಲೀಗಿನ ಶಾಂತಾ ಬಿ. ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಬ್ಬಾಸ್ ಎಂ. ಅಧಿಕಾರದಲ್ಲಿದ್ದಾರೆ.
ಬಿಜೆಪಿ ಆರೋಪ :
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಎಲ್‍ಡಿಎಫ್-ಯುಡಿಎಫ್ ಮೈತ್ರಿಕೂಟ ಕೈಜೋಡಿಸುತ್ತಿದ್ದು, ಬದಿಯಡ್ಕ ಪಂಚಾಯಿತಿಯ ಯೋಜನಾ ಸಮಿತಿಯ ನೂತನ ಉಪಾಧ್ಯಕ್ಷರ ಆಯ್ಕೆಯೇ ಇದಕ್ಕೆ ತಾಜಾ ಉದಾಹರಣೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದ್ದಾರೆ. ಪೆರಿಯಾ ಜೋಡಿ ಕೊಲೆ ಸೇರಿದಂತೆ ಅನೇಕ ವಿಷಯಗಳಲ್ಲಿ ಸಿಪಿಎಂಗೆ ಕಾಂಗ್ರೆಸ್ ವಿರೋಧವಿರುವುದು ಕೇವಲ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚುವ ಕಾರ್ಯವಾಗಿದೆ. ಅಧಿಕಾರಕ್ಕಾಗಿ ಯಾವುದೇ ತಂತ್ರಗಳನ್ನು ಹೆಣೆಯಲು ಕಾಂಗ್ರೆಸ್ ಹೆದರುವುದಿಲ್ಲ, ಪದಾಧಿಕಾರಿಗಳ ಹಿತಾಸಕ್ತಿ ಮುಖ್ಯವಲ್ಲ ಎಂಬುದನ್ನು ಕಾಂಗ್ರೆಸ್ ತೋರಿಸಿಕೊಟ್ಟಿದೆ ಎಂದು ರವೀಶ ತಂತ್ರಿ ಕುಂಟಾರು ಆರೋಪಿಸಿರುವರು.

