ಕೋಝಿಕ್ಕೋಡ್: ಹೆಚ್ಚುತ್ತಿರುವ ರಾಜಕೀಯ ಹತ್ಯೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ತೀವ್ರವಾದ ಪ್ರಚಾರ ಮಾಡುವ ಪೋಸ್ಟ್‍ಗಳನ್ನು ನಿಲ್ಲಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಕೆ. ಬೈಜುನಾಥ್ ಒತ್ತಾಯಿಸಿದ್ದಾರೆ.
ಮೂಲಭೂತ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಳೆಸುವಲ್ಲಿ ಸಾಮಾಜಿಕ ಮಾಧ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ದುರದೃಷ್ಟವಶಾತ್ ಇಂದು ಸಾಮಾಜಿಕ ಜಾಲತಾಣಗಳು ಅವರ ವಿಚಾರವನ್ನು ಒಪ್ಪದವರನ್ನು ಬೆದರಿಸುವ ತಾಣವಾಗುತ್ತಿದೆ. ಮನುಷ್ಯರ ನಿದ್ದೆ ಕೆಡಿಸುತ್ತದೆ. ಇಂತಹ ಕೃತ್ಯಗಳು ಶಾಂತಿ ಮತ್ತು ಭದ್ರತೆಯಲ್ಲಿ ಬದುಕುವ ಮೂಲಭೂತ ಮಾನವ ಹಕ್ಕುಗಳಿಗೆ ಧಕ್ಕೆ ತರುತ್ತವೆ ಎಂದು ಆಯೋಗವು ಗಮನಿಸಿದೆ.
ಈ ಕುರಿತು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ಆಯೋಗ ಸೂಚಿಸಿದೆ. ಮಾನವ ಹಕ್ಕುಗಳ ಕಾರ್ಯಕರ್ತ ನೌಶಾದ್ ತೆಕ್ಕಾಯಿಲ್ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ತೆಗೆದುಕೊಂಡ ಕ್ರಮದ ಬಗ್ಗೆ ಒಂದು ತಿಂಗಳೊಳಗೆ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ವರದಿ ಮಾಡಲು ಸೂಚಿಸಲಾಗಿದೆ.
ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ಇಂತಹ ಅಭಿಯಾನಗಳನ್ನು ಕೊನೆಗೊಳಿಸುವುದು ಅನಿವಾರ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

