HEALTH TIPS

ಮಾಡೆಲ್​ಗಳಿಬ್ಬರ ದುರಂತ ಸಾವು: ಸ್ಫೋಟಕ ಆರೋಪ ಮಾಡಿದ ಸಂಸದ ಸುರೇಶ್​ ಗೋಪಿ

         ನವದೆಹಲಿ: ಕೇರಳದ ಮಾಡೆಲ್​ಗಳಿಬ್ಬರ ದುರಂತ ಸಾವು ಪ್ರಕರಣವು ಸಂಸತ್ತಿನ ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ. ಮಾಡೆಲ್​ಗಳಿಬ್ಬರ ಸಾವು ಅಪಘಾತದಿಂದ ಸಂಭವಿಸಿದ್ದಲ್ಲ, ಅದು ಕೊಲೆ ಎಂದು ಸಂಸದ ಸುರೇಶ್​ ಗೋಪಿ ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ.

          ಮಾಡೆಲ್​ಗಳ ಕೊಲೆ ಪೂರ್ವಯೋಜಿತ ಮತ್ತು ಇಬ್ಬರ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಬ್ಬರು ಯುವಕರ ರಕ್ಷಣೆಯನ್ನು ಪಡೆದುಕೊಂಡಿದ್ದರು. ಡ್ರಗ್ಸ್​ ವ್ಯಸನಿಗಳಾಗಿದ್ದ ದಾಳಿಕೋರರು ಮಾಡೆಲ್​ಗಳನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾರೆ ಎಂದು ಸುರೇಶ್​ ಗೋಪಿ ರಾಜ್ಯಸಭೆಯಲ್ಲಿ ಆರೋಪ ಮಾಡಿದ್ದಾರೆ.

        ಮೇಲ್ಮನೆಯಲ್ಲಿ ನಡೆದ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ತಿದ್ದುಪಡಿ) ಬಿಲ್ ಮೇಲಿನ ಚರ್ಚೆಯ ವೇಳೆ ಸುರೇಶ್​ ಗೋಪಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ಡ್ರಗ್ಸ್​ ಮಾಫಿಯಾ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಆರೋಪಿಸಿದರು.

                                  ಘಟನೆ ಹಿನ್ನೆಲೆ ಏನು?
           ನವೆಂಬರ್​ 1ರಂದು ಫೋರ್ಟ್​ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಹಿಂದಿರುಗುವಾಗ ಕೇರಳದ ವ್ಯಟ್ಟಿಲ-ಪಲರಿವಟ್ಟಮ್​ ರಾಷ್ಟ್ರೀಯ ಹೆದ್ದಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಭರವಸೆಯ ಮಾಡೆಲ್​ಗಳು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 2019ರ ಮಿಸ್​ ಕೇರಳ ವಿಜೇತೆ ಅಟ್ಟಿಂಗಲ್​ ಮೂಲದ ಅನ್ಸಿ ಕಬೀರ್​ (25), ತ್ರಿಸ್ಸೂರ್​ ಮೂಲದ ರನ್ನರ್​ ಅಪ್​ ಅಂಜನಾ ಶಾಜನ್​ (24) ಮತ್ತು ಕೆ.ಎ. ಮಹಮ್ಮದ್​ ಆಶಿಕ್​ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್​ ರೆಹಮಾನ್​ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಇನ್ನು ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್​ ನಂಬರ್​ 18 ಮಾಲೀಕ ರಾಯ್​ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್​ರನ್ನು ಸಂಪರ್ಕಿಸಿದ್ದಾರೆ. ರಾಯ್​ ಮತ್ತು ಸೈಜು ಸ್ನೇಹಿತರು ಎಂದು ತಿಳಿದುಬಂದಿದೆ. ಅಪಘಾತದ ಬೆನ್ನಲ್ಲೇ ಸೈಜು, ರಾಯ್​ ಮತ್ತು ಹೋಟೆಲ್​ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ.

             ಆದರೆ, ಸೈಜು ಹೇಳಿರುವ ಪ್ರಕಾರ ಹೋಟೆಲ್​ನಿಂದ ಹೊರಟ ಮಾಡೆಲ್​ಗಳು ಮತ್ತು ಕಾರಿನ ಚಾಲಕ ಅಬ್ದುಲ್​ ರೆಹಮಾನ್​ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲು ಮತ್ತು ಚಾಲನೆ ಮಾಡದಂತೆ ಹೇಳಲು ಹಿಂಬಾಲಿಸಿದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ಒಪ್ಪಲು ಪೊಲೀಸರು ತಯಾರಿಲ್ಲ.

           ಅಪಘಾತ ಸಂಭವಿಸಿದ ನಂತರ ವ್ಯಕ್ತಿಯೊಬ್ಬ ಆಡಿ ಕಾರಿನಿಂದ ಇಳಿದು ಪರಿಸ್ಥಿತಿಯನ್ನು ಅವಲೋಕಿಸಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಇದಲ್ಲದೆ, ಅವರ ಸ್ನೇಹಿತರು ಬೇರೆ ವಾಹನಗಳಲ್ಲಿ ಬಂದಿದ್ದಾರೆ ಎಂದು ಶಂಕಿಸಲಾಗಿದೆ. ಅಪಘಾತ ಘಟನಾ ಸ್ಥಳದಲ್ಲಿ ನಿಗಾ ವಹಿಸಿ ಹಿಂತಿರುಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆಡಿ ಕಾರಿನಲ್ಲಿದ್ದವರು ಕೂಡ ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿರುವುದು ಪೊಲೀಸರು ಮತ್ತೆ ಪ್ರಕರಣದ ಮೇಲೆ ಅನುಮಾನ ಮೂಡಿದ್ದು, ಪ್ರಕರಣ ಇನ್ನುಷ್ಟು ನಿಗೂಢವಾಗುತ್ತಿದೆ. ಸದ್ಯ ತನಿಖೆ ಮುಂದುವರಿದಿದ್ದು, ಪ್ರಕರಣ ಯಾವು ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries