ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಪೆರಿಯ ಕ್ಯಾಂಪಸ್‍ನ ಜಿಯಾಲಜಿ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಅಮ್ಮೂಸ್ ಕೆ. ಜಯನ್ 2022-23ನೇ ಸಾಲಿನ ಫುಲ್‍ಬ್ರೈಟ್-ಕಲಾಂ ಕ್ಲೈಮೆಟ್ ಫೆಲೋಶಿಪ್(ಸುಮಾರು 40ಲಕ್ಷ ರೂ.)ಗೆ ಆಯ್ಕೆಯಾಗಿದ್ದಾರೆ.
ಭಾರತ ಮತ್ತು ಅಮೆರಿಕಾದಲ್ಲಿನ ಹವಾಮಾನ ವೈಪರೀತ್ಯದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಹವಾಮಾನ ವೈಪರೀತ್ಯದ ಬಗ್ಗೆ ಉಭಯ ದೇಶಗಳ ಸಹಕಾರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2014ರಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹೆಸರಲ್ಲಿ ಫೆಲೋಶಿಪ್ ಆರಂಭಿಸಲಾಗಿದೆ. ಭಾರತದಿಂದ ಅಯ್ಕೆಯಾಗಿರುವ ಮೂವರು ವಿದ್ಯಾರ್ಥಿಗಳಲ್ಲಿ ಅಮ್ಮೂಸ್ ಕೆ. ಜಯನ್ ಒಬ್ಬರಾಗಿದ್ದಾರೆ. ಕೋಟ್ಟಾಯಂ ಜಿಲ್ಲೆಯ ನಾಟ್ಟಕಯಂ ನಿವಾಸಿಯಾಗಿರುವ ಇವರು ಒಂಬತ್ತು ತಿಂಗಳ ಕಾಲ ಅಮೆರಿಕಾದ ಅರಿಸೋನಾ ವಿಶ್ವ ವಿದ್ಯಾಲಯದಲ್ಲಿ ಸಂಶೋಧನಾ ಚಟುವಟಿಕೆ ನಡೆಸಲಿದ್ದಾರೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಸಿಜಿನ್‍ಕುಮಾರ್ ಎ.ವಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಲಿದ್ದಾರೆ.

