ಬದಿಯಡ್ಕ: ಕುಂಬಳೆ ಮುಳ್ಳೇರಿಯ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ವಿವಿಧೆಡೆಗಳ ತಿರುವುಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಯಂತ್ರಗಳ ಸಹಾಯದಿಂದ ಕಳೆದೆರಡು ತಿಂಗಳಿನಿಂದ ಕೆಲಸಕಾರ್ಯಗಳು ಭರದಿಂದ ಸಾಗುತ್ತಿವೆ. ಕನ್ನೆಪ್ಪಾಡಿಯಿಂದ ಬದಿಯಡ್ಕ ತನಕ ಅತೀ ಹೆಚ್ಚು ತಿರುವುಗಳಿರುವ ಸ್ಥಳವಾಗಿದೆ. ಸುಮಾರು 6-7 ತಿರುವುಗಳ ರಸ್ತೆಬದಿಯಲ್ಲಿ ಗುಡ್ಡವನ್ನು ಹಿಟಾಚಿ ಯಂತ್ರದ ಮೂಲಕ ಅಗೆದು ಅಗಲಗೊಳಿಸಲಾಗಿದೆ. ಬದಿಯಡ್ಕ ಪೊಲೀಸ್ ಠಾಣೆಯ ಸ್ವಲ್ಪ ಮುಂದೆ ಇರುವ ಅತಿದೊಡ್ಡ ತಿರುವಿನ ಬದಿಯ ಗುಡ್ಡವನ್ನು ಅಗೆಯಲಾಗಿದೆ.
ರೀಬಿಲ್ಡ್ ಕೇರಳ ಯೋಜನೆಯ ಭಾಗವಾಗಿ ಕುಂಬಳೆ-ಮುಳ್ಳೇರಿಯ 29 ಕಿಲೋಮೀಟರ್ ರಸ್ತೆ ಕಾಮಗಾರಿ ಕೆಎಸ್‍ಟಿಪಿ (ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಪ್ರಾಜೆಕ್ಟ್)ಉಸ್ತುವಾರಿಯಲ್ಲಿ 158 ಕೋಟಿ.ರೂಗಳನ್ನು ವ್ಯಯಿಸಿ ಆರಂಭಿಸಲಾಗಿದೆ. ರಸ್ತೆಯ ಇಕ್ಕೆಲಗಳನ್ನು ಅಗಲಗೊಳಿಸುವ ಕಾರ್ಯ ನಡೆಯುತ್ತಿದೆ. ಮೋರಿ ಸಂಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.
ಇದೇ ವೇಳೆ ಪೆರಡಾಲ ಹೊಳೆಗೆ ಈ ರಸ್ತೆಯ ಮಡಿಪ್ಪು ಎಂಬಲ್ಲಿ ಸೇತುವೆಯಿದೆ. ನೂತನ ರಸ್ತೆ ನಿರ್ಮಾಣವಾಗುವ ಸಂದರ್ಭದಲ್ಲಿ ಪೆರಡಾಲ ಸೇತುವೇ ಏನಾಗಲಿದೆ ಎಂಬುದು ಹಲವರ ಕುತೂಹಲವಾಗಿದೆ. ಈಗಾಗಲೇ ಸೇತುವೆಯ ಅಡಿಭಾಗದಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಪ್ರಸ್ತುತ ಕಾಮಗಾರಿಯ ಸಂದರ್ಭದಲ್ಲಿ ಪೆರಡಾಲ ಸೇತುವೆಯ ದುರಸ್ಥಿ ಅಥವಾ ಹೊಸ ಸೇತುವೆ ನಿರ್ಮಾಣದ ಬಗ್ಗೆ ಯೋಜನೆಯಲ್ಲಿ ಅವಕಾಶವಿಲ್ಲ ಎಂದು ಅಧಿಕೃತರು ತಿಳಿಸಿದ್ದಾರೆ. ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ಸೇತುವೆಯನ್ನು ಈಗ ಇರುವ ರೀತಿಯಲ್ಲಿಯೇ ಮುಂದುವರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಬದಿಯಡ್ಕದಿಂದ ಕನ್ನೆಪ್ಪಾಡಿಯ ವಿವಿಧೆಡೆಗಳಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಗುಡ್ಡವು ಜರಿದು ಬಿದ್ದು ರಸ್ತೆ ಹಾಳಾಗದಂತೆ ಆಳೆತ್ತರದ ತಡೆಗೋಡೆ ನಿರ್ಮಿಸಲಾಗಿದೆ. ರಸ್ತೆ ಬದಿಯ ವಿದ್ಯುತ್ ಲೈನ್ ಗಳು, ಟ್ರಾನ್ಸ್‍ಫರ್ ಮಾರ್ ಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಸಾರ್ವಜನಿಕ ಸ್ಪಂಧನೆಯ ಕೊರತೆ!:
ಇದೇ ವೇಳೆ ರಸ್ತೆ ಅಗಲೀಕರಣಗೊಳ್ಳುತ್ತಿರುವಾಗ ಸಾರ್ವಜನಿಕ ಸ್ಪಂಧನದ ಕೊರತೆ ಎದ್ದು ಕಾಣುತ್ತಿದೆ. ರಸ್ತೆಯ ಇಬ್ಬದಿಗಳಲ್ಲೂ ಅಲ್ಲಲ್ಲಿ ಹಾಕಿರುವ ನಾಮ/ ಸೂಚನಾ ಫಲಕ, ಹರಕೆ/ ಕಾಣಿಕೆ ಡಬ್ಬಿಗಳು, ಗೂಡಂಗಡಿಗಳೇ ಮೊದಲಾದವುಗಳನ್ನು ಸ್ಥಳಾಂತರಿಸುವಲ್ಲಿ ಸಾರ್ವಜನಿಕರೇ ಮುಜಂದಾಗಬೇಕಾದ ಅಗತ್ಯವಿದೆ. ಆದರೆ ಸಾರ್ವಜನಿಕರು ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವುದು ಪ್ರಜ್ಞಾವಂತಿಕೆಯ ಕೊರತೆಯನ್ನು ಎತ್ತಿ ತೋರಿಸಿದೆ.
ಅಭಿಮತ:
ಪೆರಡಾಲ ಸೇತುವೆಯ ದುರಸ್ಥಿಯಾಗಲಿ, ನೂತನ ಸೇತುವೆ ನಿರ್ಮಾಣವಾಗಲಿ ಪ್ರಸ್ತುತ ಯೋಜನೆಯಲ್ಲಿಲ್ಲ. ಆದ್ದರಿಂದ ಸಾರ್ವಜನಿಕರು, ಅಥವಾ ಸ್ಥಳೀಯಾಡಳಿ ಪ್ರತಿನಿಧಿಗಳು ಕೆ.ಎಸ್.ಟಿ.ಪಿ.ಗೆ ಮನವಿ ನೀಡಿದರೆ ಪರಿಶೀಲಿಸಬಹುದಾಗಿದೆ.
-ಸಚಿನ್
ಪಿ ಆರ್ ಒ(ಕೆಎಸ್‍ಟಿಪಿ:ಕುಂಬಳೆ -ಮುಳ್ಳೇರಿಯ ನಿರ್ಮಾಣ ವಲಯ)

