ಕಾಸರಗೋಡು: ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಘಟಕ ಜಂಟಿಯಾಗಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಟ್ಟದ ಸಾವಿತ್ರಿ ಬಾಪುಲೆ ವ್ಯಕ್ತಿ ಕಥೆ ಕವನ ಸ್ಪರ್ಧೆಯಲ್ಲಿ ಕಾಸರಗೋಡು ನೆಲ್ಲಿಕ್ಕಟ್ಟೆ ಸಮೀಪದ ಚೂರಿಪ್ಪಳ್ಳದ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ವಾಣಿಶ್ರೀ ಕಾಸರಗೋಡು ಇವರು ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಸಂಪೂರ್ಣವಾಗಿ ಸಾವಿತ್ರಿ ಬಾಪುಲೆಯವರ ಜೀವನಚರಿತ್ರೆಯ ಚಿತ್ರಣವನ್ನು 24 ಸಾಲುಗಳ ತಮ್ಮ ಕವನದಲ್ಲಿ ವಿವರಿಸಿ ಇವರು ಈ ಸಾಧನೆಗೆ ಪಾತ್ರರಾದರು. ಸಾವಿತ್ರಿ ಬಾಪುಲೆ ಕುರಿತಾಗಿ ಪ್ರಬಂಧವೊಂದನ್ನೂ ಬರೆದಿರುವ ಇವರು ಖ್ಯಾತ ಆಶು ಕವಿ ಪೊಟ್ಟಿಪ್ಪಲ ನಾರಾಯಣ ಭಟ್ ರ ಪುತ್ರ ಡಾ. ವೆಂಕಟ ಗಿರೀಶ ರ ಧರ್ಮಪತ್ನಿ. ಪಾರ್ಪಜೆ ಈಶ್ವರ ಭಟ್- ದೇವಕಿ ಭಟ್ ದಂಪತಿಗಳ ಪುತ್ರಿಯಾದ ಇವರು ಕನ್ನಡ, ಹವಿಗನ್ನಡ, ತುಳು, ಮಲಯಾಳವೂ ಸೇರಿ ಬಹುಬಾಷೆಯಲ್ಲಿ ಕವನ ಹಾಗೂ ಪ್ರಬಂಧಗಳನ್ನು ಬರೆಯುತ್ತಾರೆ. ಇವರು ಭಾಗವಹಿಸುವ ಎಲ್ಲಾ ಕವಿಗೋಷ್ಠಿಗಳಲ್ಲಿ ಔಷದ ಗಿಡಮೂಲಿಕೆಗಳ ಉಪಯೋಗದ ಕುರಿತು ತಮ್ಮ ಸ್ವರಚಿತ ಕವನದ ಮೂಲಕ ವಿವರಿಸುವುದು ವಿಶೇಷತೆಯಾಗಿ ಜನಮನ ಸೆಳೆದಿದೆ. ಗಡಿನಾಡು, ಕನ್ನಡದ ಕುರಿತಾದ ಹೋರಾಟವನ್ನು ತಮ್ಮ ಕವನಗಳಲ್ಲಿ ವಿವರಿಸುವ ಇವರು ತಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಸೇವೆಯ ಮೂಲಕ ರೋಗಿಗಳ ಸೇವೆಗೈದು ಅತ್ಯುತ್ತಮ ವೈದ್ಯೆ ಎನ್ನುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

