ನವದೆಹಲಿ: :ಶನಿವಾರ ಸಂಜೆ ನವದೆಹಲಿಯ ವಿಜಯ ಚೌಕ್‌ನಲ್ಲಿ ನಡೆದ ಬೀಟಿಂಗ್ ರಿಟ್ರೀಟ್ ಈ ವರ್ಷದ ಗಣರಾಜ್ಯೋತ್ಸವ ಸಂಭ್ರಮಕ್ಕೆ ತೆರೆಯೆಳೆದಿದೆ. ದಿನದ ಯುದ್ಧದ ಅಂತ್ಯವನ್ನು ಸೂಚಿಸುವ ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿರುವ ಬೀಟಿಂಗ್ ರಿಟ್ರೀಟ್ ಪ್ರತಿ ವರ್ಷ ಜ.29ರಂದು ನಡೆಯುತ್ತದೆ.
0
samarasasudhi
ಜನವರಿ 30, 2022
ನವದೆಹಲಿ: :ಶನಿವಾರ ಸಂಜೆ ನವದೆಹಲಿಯ ವಿಜಯ ಚೌಕ್‌ನಲ್ಲಿ ನಡೆದ ಬೀಟಿಂಗ್ ರಿಟ್ರೀಟ್ ಈ ವರ್ಷದ ಗಣರಾಜ್ಯೋತ್ಸವ ಸಂಭ್ರಮಕ್ಕೆ ತೆರೆಯೆಳೆದಿದೆ. ದಿನದ ಯುದ್ಧದ ಅಂತ್ಯವನ್ನು ಸೂಚಿಸುವ ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿರುವ ಬೀಟಿಂಗ್ ರಿಟ್ರೀಟ್ ಪ್ರತಿ ವರ್ಷ ಜ.29ರಂದು ನಡೆಯುತ್ತದೆ.
ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಹಲವಾರು ಹೊಸ ರಾಗಗಳನ್ನು ಸೇರಿಸಲಾಗಿದ್ದು,ಕೇರಳ,ಹಿಂದ್ ಕಿ ಸೇನಾ ಮತ್ತು ಯೇ ಮೇರೆ ವತನ್ ಕೆ ಲೋಗೋ ಇವುಗಳಲ್ಲಿ ಸೇರಿದ್ದವು.
1950ರಿಂದಲೂ ಬೀಟಿಂಗ್ ರಿಟ್ರೀಟ್‌ನಲ್ಲಿ ಖಾಯಂ ಸ್ಥಾನ ಪಡೆದಿದ್ದ ಮಹಾತ್ಮಾ ಗಾಂಧಿಯವರ ನೆಚ್ಚಿನ ಗೀತೆಯಾಗಿದ್ದ ಕ್ರಿಶ್ಚಿಯನ್ ಸ್ತುತಿಗೀತೆ 'ಅಬೈಡ್ ವಿತ್ ಮಿ'ಅನ್ನು ಈ ವರ್ಷ ಕೈಬಿಡಲಾಗಿದ್ದು,ಅದರ ಬದಲಿಗೆ 'ಸಾರೆ ಜಹಾಂ ಸೆ ಅಚ್ಛಾ 'ಗೀತೆಯನ್ನು ಸೇರಿಸಿಕೊಳ್ಳಲಾಗಿತ್ತು.
10 ನಿಮಿಷಗಳ ಕಾಲ ವಿಶೇಷ ರಚನೆಯಲ್ಲಿ ಹಾರಾಡಿದ ಸಾವಿರ ಡ್ರೋನ್‌ಗಳು ರಾಷ್ಟ್ರ ರಾಜಧಾನಿಯ ಕತ್ತಲ ಆಗಸದಲ್ಲಿ ರಾಷ್ಟ್ರಧ್ವಜದ ಕೇಸರಿ,ಬಿಳಿ ಮತ್ತು ಹಸಿರು ಬಣ್ಣದ ಬೆಳಕಿನ ಚಿತ್ತಾರವನ್ನು ಮೂಡಿಸಿ ಮನಸೂರೆಗೈದ ಬಳಿಕ ತಮ್ಮ ಹಾರಾಟದಲ್ಲಿ ಮಹಾತ್ಮಾ ಗಾಂಧಿಯವರ ನೆರಳುಗೆರೆಯ ಚಿತ್ರವನ್ನು ರೂಪಿಸಿದವು. ನಾರ್ಥ್ ಬ್ಲಾಕ್ ಮತ್ತು ಸೌಥ್ ಬ್ಲಾಕ್ಗಳ ಗೋಡೆಗಳ ಮೇಲೆ ಪ್ರೊಜೆಕ್ಷನ್ ಮ್ಯಾಪಿಂಗ್ ಸಮಾರಂಭಕ್ಕೆ ಇನ್ನಷ್ಟು ಕಳೆ ನೀಡಿತ್ತು.
ಭಾರತವು ಬ್ರಿಟನ್,ರಷ್ಯಾ ಮತ್ತು ಚೀನಾ ಬಳಿಕ ಬೀಟಿಂಗ್ ರಿಟ್ರೀಟ್‌ನಲ್ಲಿ ಆಗಸದಲ್ಲಿ 1000 ಡ್ರೋನ್‌ಗಳು ಹಾರಾಟವನ್ನು ಕೈಗೊಂಡ ವಿಶ್ವದ ನಾಲ್ಕನೇ ದೇಶವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಭಾರತೀಯ ಸೇನಾಪಡೆ,ನೌಕಾಪಡೆ,ವಾಯುಪಡೆ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ವಾದ್ಯವೃಂದಗಳಿಂದ ಸಂಗೀತದ ಕಂಪು ವಾತಾವರಣದಲ್ಲಿ ಪಸರಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್,ಪ್ರಧಾನಿ ನರೇಂದ್ರ ಮೋದಿ,ರಕ್ಷಣಾ ಸಚಿವ ರಾಜನಾಥ ಸಿಂಗ್,ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ, ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ,ವಾಯುಪಡೆಯ ಮುಖ್ಯಸ್ಥ ಚೀಫ್ ಆರ್ ಮಾರ್ಷಲ್ ವಿ.ಆರ್.ಚೌಧರಿ,ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.