ನವದೆಹಲಿ: ನಾನು ನಿಮ್ಮ ಬಡತನದ ಮನಸ್ಥಿತಿ ಪರಿಹರಿಸಬೇಕೆಂದು ಬಯಸಿದ್ದೀರಾ? ಎಂದು ಇತ್ತೀಚಿಗೆ ತಾವು ಮಂಡಿಸಿದ್ದ ಬಜೆಟ್ ಬಡವರ ಪರವಾಗಿಲ್ಲ ಎಂಬ ಟೀಕೆಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಈ ಹಿಂದೆ 2013ರಲ್ಲಿ 'ಬಡತನ ಎನ್ನುವುದು ಒಂದು ಮನಸ್ಥಿತಿ ಎಂದಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮಾನ್ ಅವರು, ನಾನು ನಿಮ್ಮ ಬಡತನದ ಮನಸ್ಥಿತಿ ಪರಿಹರಿಸಬೇಕೇ ಎಂದು ಪ್ರಶ್ನಿಸಿದರು.
ನಿನ್ನೆ ರಾಜ್ಯಸಭೆಯಲ್ಲಿ 2022-23ರ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ತಮ್ಮ ಬಜೆಟ್ ಆರ್ಥಿಕತೆಗೆ ಸ್ಥಿರತೆಯನ್ನು ತರುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕ್ರಮಗಳನ್ನು ಹೊಂದಿದೆ ಎಂದರು.
ನೇರವಾಗಿ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿದೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್ ಅವರು, "ನಿಮ್ಮ ಮಾಜಿ ಅಧ್ಯಕ್ಷರು ಹೇಳಿದ್ದರು, 'ಬಡತನ ಎಂದರೆ ಆಹಾರ, ಹಣ ಅಥವಾ ವಸ್ತುಗಳ ಕೊರತೆ ಎಂದಲ್ಲ. ಜನರು ಆತ್ಮವಿಶ್ವಾಸ ಪಡೆದುಕೊಂಡರೆ ಬಡತನವನ್ನು ನೀಗಿಸಬಹುದು' ಎಂದಿದ್ದರು. 'ಇದು ಒಂದು ಮನಸ್ಥಿತಿ. ನಾನು ಆ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ನಿಮಗೆ ಅದು ಯಾರೆಂದು ತಿಳಿದಿದೆ" ಎಂದರು.
2014ರ ಹಿಂದಿನ ಗ್ರಾಹಕ ದರ ಸೂಚ್ಯಂಕದ ಅಂಕಿ ಅಂಶವನ್ನು ನಿರ್ಮಲಾ ಉಲ್ಲೇಖಿಸಿದರು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೂಚ್ಯಂಕ ಶೇ 9.1ರಷ್ಟು ಇದ್ದರೆ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಶೇ 6.2ರಷ್ಟಿದೆ. ವಿರೋಧ ಪಕ್ಷಗಳಿಗೆ ಕಡಿಮೆ ಬಿಕ್ಕಟ್ಟನ್ನೂ ಎದುರಿಸಲು ಸಾಧ್ಯವಾಗಿರಲಿಲ್ಲ ಎಂದು ಟೀಕಿಸಿದ್ದಾರೆ.

